ಬೆಂಗಳೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಕಾರ್ಯನಿರ್ವಹಿಸುತ್ತಿರುವ “ಸಖಿ” ಒನ್ ಸ್ಟಾಪ್ ಸೆಂಟರ್‌ಗಳಲ್ಲಿ ಗುತ್ತಿಗೆ ಆಧಾರದಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಈ ನೇಮಕಾತಿಯಡಿ ಘಟಕ ಆಡಳಿತಾಧಿಕಾರಿ (03), ಆಪ್ತ ಸಮಾಲೋಚಕರು (03), ಸಮಾಜ ಸೇವಾ ಕಾರ್ಯಕರ್ತರು/ಕೇಸ್ ವರ್ಕರ್ (07), ಕಾನೂನು ಸಲಹೆಗಾರರು/ಪ್ಯಾರಾ ಲೀಗಲ್ (03) ಹಾಗೂ ವಿವಿದೋದ್ದೇಶ ಸ್ವಚ್ಛತಗಾರರು/ಸೆಕ್ಯೂರಿಟಿ (08) ಹುದ್ದೆಗಳು ಖಾಲಿ ಇವೆ.
ಘಟಕ ಆಡಳಿತಾಧಿಕಾರಿ ಹುದ್ದೆಗೆ ಎಂ.ಎಸ್.ಡಬ್ಲ್ಯೂ, ಸ್ನಾತಕೋತ್ತರ ಕಾನೂನು ಪದವಿ, ಎಂ.ಎಸ್.ಸಿ (ಹೋಮ್ ಸೈನ್ಸ್/ಸೈಕಾಲಜಿ/ಸೈಕಿಯಾಟ್ರಿ) ಹೊಂದಿದ್ದು, ಕನಿಷ್ಠ 5 ವರ್ಷಗಳ ಅನುಭವ ಅಗತ್ಯವಿದೆ. ಆಪ್ತ ಸಮಾಲೋಚಕರ ಹುದ್ದೆಗೆ ಸಂಬಂಧಿತ ಸ್ನಾತಕೋತ್ತರ ಪದವಿಯೊಂದಿಗೆ 3 ವರ್ಷಗಳ ಅನುಭವ ಕಡ್ಡಾಯವಾಗಿದೆ.
ಸಮಾಜ ಸೇವಾ ಕಾರ್ಯಕರ್ತರು/ಕೇಸ್ ವರ್ಕರ್ ಹುದ್ದೆಗೆ ಬಿ.ಎಸ್.ಡಬ್ಲ್ಯೂ ಅಥವಾ ಬಿ.ಎ (ಸೋಷಿಯಾಲಜಿ/ಮಹಿಳಾ ಅಧ್ಯಯನ) ಪದವಿ ಮತ್ತು 2 ವರ್ಷಗಳ ಅನುಭವ ಇರಬೇಕು. ಕಾನೂನು ಸಲಹೆಗಾರರು/ಪ್ಯಾರಾ ಲೀಗಲ್ ಹುದ್ದೆಗೆ ಕಾನೂನು ಪದವಿ ಹಾಗೂ 2 ವರ್ಷಗಳ ಅನುಭವ ಅಗತ್ಯ. ಸ್ವಚ್ಛತಗಾರರು/ಸೆಕ್ಯೂರಿಟಿ ಹುದ್ದೆಗೆ ಕನಿಷ್ಠ 7ನೇ ತರಗತಿ ವಿದ್ಯಾರ್ಹತೆ ಹೊಂದಿರಬೇಕು.
ಅಭ್ಯರ್ಥಿಗಳ ವಯೋಮಿತಿ 18 ರಿಂದ 45 ವರ್ಷಗಳೊಳಗಿರಬೇಕು. ಸ್ಥಳೀಯ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ.
ಆಸಕ್ತ ಮಹಿಳಾ ಅಭ್ಯರ್ಥಿಗಳು ತಮ್ಮ ರೆಸ್ಯೂಮ್ ಹಾಗೂ ಅಗತ್ಯ ದಾಖಲೆಗಳೊಂದಿಗೆ ಜನವರಿ 30ರೊಳಗೆ ಉಪ ನಿರ್ದೇಶಕರವರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬೆಂಗಳೂರು ನಗರ ಜಿಲ್ಲೆ, ಸುಧಾರಣಾ ಸಂಸ್ಥೆಗಳ ಸಂಕೀರ್ಣ, ಡಾ. ಎಂ.ಹೆಚ್. ಮರಿಗೌಡ ರಸ್ತೆ, ಬೆಂಗಳೂರು–560029 ಇಲ್ಲಿಗೆ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ: 080-29578688 ಅನ್ನು ಸಂಪರ್ಕಿಸಬಹುದು ಎಂದು ಬೆಂಗಳೂರು ನಗರ ಜಿಲ್ಲೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







