ಶಿವಮೊಗ್ಗ:
ಮಲೆನಾಡಿನ ಹೆಬ್ಬಾಗಿಲು ಎಂದೇ ಪ್ರಸಿದ್ಧವಾಗಿರುವ ಶಿವಮೊಗ್ಗ ನಗರದಲ್ಲಿ ಸಾರ್ವಜನಿಕರ ಆರೋಗ್ಯದ ಜೊತೆ ಚೆಲ್ಲಾಟವಾಡುತ್ತಿದ್ದ ಬೇಕರ್ಸ್ ಮಾಫಿಯಾದ ಕರಾಳ ಮುಖವನ್ನು ಸುವರ್ಣ ನ್ಯೂಸ್ ಸ್ಟಿಂಗ್ ಆಪರೇಷನ್ ಮೂಲಕ ಬಯಲಿಗೆಳೆದಿದೆ. ಈ ವರದಿ ಪ್ರಸಾರವಾದ ಬೆನ್ನಲ್ಲೇ ಜಿಲ್ಲಾಡಳಿತ ಎಚ್ಚೆತ್ತುಕೊಂಡು ತ್ವರಿತ ಕಾರ್ಯಾಚರಣೆಗೆ ಇಳಿದಿದ್ದು, ಇದೊಂದು ಸ್ಪಷ್ಟವಾದ ‘ಸುವರ್ಣ ನ್ಯೂಸ್ ಬಿಗ್ ಇಂಪ್ಯಾಕ್ಟ್’ ಆಗಿದೆ.
ಹೇವರಿಕೆ ತರಿಸುವ ದೃಶ್ಯಗಳು – ಸ್ವಚ್ಛತೆಯಿಲ್ಲದ ತಯಾರಿಕಾ ಘಟಕಗಳು
ಸುವರ್ಣ ನ್ಯೂಸ್ ನಡೆಸಿದ ಸ್ಟಿಂಗ್ ಆಪರೇಷನ್ನಲ್ಲಿ, ಕಿರಿದಾದ ಹಾಗೂ ಅತ್ಯಂತ ಅಸ್ವಚ್ಛ ಪರಿಸರದಲ್ಲಿ ಕೇಕ್, ಬ್ರೆಡ್ ಮತ್ತು ವಿವಿಧ ಸಿಹಿ ತಿನಿಸುಗಳನ್ನು ತಯಾರಿಸುತ್ತಿದ್ದ ದೃಶ್ಯಗಳು ದಾಖಲಾಗಿದ್ದವು.
ಮಾರುಕಟ್ಟೆಗೆ ಸರಬರಾಜಾಗುತ್ತಿದ್ದ ಯಾವುದೇ ತಿನಿಸುಗಳ ಮೇಲೆ ತಯಾರಿಕಾ ದಿನಾಂಕ (Date of Manufacturing) ಅಥವಾ ‘ಬೆಸ್ಟ್ ಬಿಫೋರ್ ಯೂಸ್’ (Best Before Use) ಲೇಬಲ್ಗಳೇ ಇರಲಿಲ್ಲ.
ಅತ್ಯಂತ ಆತಂಕಕಾರಿ ಅಂಶವೆಂದರೆ,
ಹಾಳಾದ, ಬೂಷ್ಟು ಹಿಡಿದ ಹಳೆಯ ಬ್ರೆಡ್ಗಳನ್ನು ಪುನಃ ಬಳಸಿಕೊಂಡು ಹೊಸ ತಿನಿಸುಗಳನ್ನು ತಯಾರಿಸಲಾಗುತ್ತಿತ್ತು ಎಂಬ ಸತ್ಯ ವರದಿಯಿಂದ ಬಹಿರಂಗವಾಗಿತ್ತು.
ಮಧ್ಯಾಹ್ನ ಸುದ್ದಿ – ಸಂಜೆಯಲ್ಲೇ ಅಧಿಕಾರಿಗಳ ದಾಳಿ
ಇಂದು ಮಧ್ಯಾಹ್ನ ಸುವರ್ಣ ನ್ಯೂಸ್ನಲ್ಲಿ ವಿಸ್ತೃತ ವರದಿ ಪ್ರಸಾರವಾಗುತ್ತಿದ್ದಂತೆಯೇ ಜಿಲ್ಲಾಡಳಿತ ತಕ್ಷಣ ಸ್ಪಂದಿಸಿತು.
ಸಂಜೆಯ ವೇಳೆಗೆ ಶಿವಮೊಗ್ಗ ಉಪ ವಿಭಾಗಾಧಿಕಾರಿ ಹಾಗೂ ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿಯಾಗಿರುವ ಸತ್ಯನಾರಾಯಣ ಅವರ ನೇತೃತ್ವದಲ್ಲಿ,
ಜಿಲ್ಲಾ ಆಹಾರ ಮತ್ತು ಪಡಿತರ ಇಲಾಖೆ ನಿರ್ದೇಶಕ ಅವಿನ್,
ಮಹಾನಗರ ಪಾಲಿಕೆ ಆರೋಗ್ಯ ನಿರೀಕ್ಷಕ ವಿಕಾಸ್ ಕುಮಾರ್
ಇವರನ್ನೊಳಗೊಂಡ ತಂಡವು ಸರಣಿ ದಾಳಿ ಆರಂಭಿಸಿತು.
ದುರ್ಗಿಗುಡಿಯ ‘ಕೇಕ್ ವರ್ಲ್ಡ್’ ಮೇಲೆ ಎಸಿ ನೇತೃತ್ವದಲ್ಲಿ ದಾಳಿ
ನಗರದ ಪ್ರತಿಷ್ಠಿತ ಬಡಾವಣೆ ದುರ್ಗಿಗುಡಿಯಲ್ಲಿರುವ ‘ಕೇಕ್ ವರ್ಲ್ಡ್’ ಬೇಕರಿಗೆ ಅಧಿಕಾರಿಗಳು ದಾಳಿ ನಡೆಸಿದರು. ಅಲ್ಲಿ ಕಂಡುಬಂದ ಅಶುಚಿತ್ವ ಹಾಗೂ ಅಕ್ರಮ ಚಟುವಟಿಕೆಗಳನ್ನು ಕಂಡು ಅಧಿಕಾರಿಗಳೇ ಬೆಚ್ಚಿಬಿದ್ದರು.
ಅತಿಯಾದ ರಾಸಾಯನಿಕ ಬಳಕೆ ಮಾಡಿದ ಕೇಕ್ಗಳು
ಹಳೆಯ ಹಾಗೂ ಕೊಳೆತ ಬ್ರೆಡ್ಗಳುಆರೋಗ್ಯಕ್ಕೆ ಅಪಾಯಕಾರಿ ಪದಾರ್ಥಗಳು
ಇವೆಲ್ಲವನ್ನೂ ವಶಪಡಿಸಿಕೊಂಡ ಅಧಿಕಾರಿಗಳು, ತಕ್ಷಣವೇ ಕಸದ ಲಾರಿಗೆ ತುಂಬಿಸಿ ಸಂಪೂರ್ಣವಾಗಿ ನಾಶಪಡಿಸಿದರು.
ನಾಲ್ಕು ದಿನ ನಿರಂತರ ಕಾರ್ಯಾಚರಣೆ – ಬೇಕರ್ಸ್ ಮಾಫಿಯಾ ವಿರುದ್ಧ ಸಮರ
ಈ ಕುರಿತು ಮಾತನಾಡಿದ ಎಸಿ ಸತ್ಯನಾರಾಯಣ ಅವರು,
“ಈ ಕಾರ್ಯಾಚರಣೆ ಇಲ್ಲಿಗೇ ನಿಲ್ಲುವುದಿಲ್ಲ. ಮುಂದಿನ ನಾಲ್ಕು ದಿನಗಳ ಕಾಲ ಶಿವಮೊಗ್ಗ ಜಿಲ್ಲೆಯ ಎಲ್ಲಾ ಬೇಕರಿ ಹಾಗೂ ತಿನಿಸು ತಯಾರಿಕಾ ಘಟಕಗಳ ಮೇಲೆ ನಿರಂತರ ದಾಳಿ ನಡೆಸಲಾಗುತ್ತದೆ. ಸಾರ್ವಜನಿಕರ ಆರೋಗ್ಯದೊಂದಿಗೆ ಆಟವಾಡುವ ಯಾರನ್ನೂ ಬಿಡುವುದಿಲ್ಲ,”
ಎಂದು ಕಠಿಣ ಎಚ್ಚರಿಕೆ ನೀಡಿದರು.
ಸುವರ್ಣ ನ್ಯೂಸ್ ಜಾಗೃತಿಗೆ ಸಾರ್ವಜನಿಕ ಮೆಚ್ಚುಗೆ
ಸುವರ್ಣ ನ್ಯೂಸ್ ನಡೆಸಿದ ಈ ತನಿಖಾತ್ಮಕ ವರದಿಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. “ಜನರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಮಾಧ್ಯಮದ ಹೊಣೆಗಾರಿಕೆಯ ಉದಾಹರಣೆ” ಎಂದು ನಾಗರಿಕರು ಶ್ಲಾಘಿಸಿದ್ದಾರೆ.







