ದೇಶಾದ್ಯಂತ ಮಕರ ಸಂಕ್ರಾಂತಿ ಹಬ್ಬದ ಸಡಗರ ಜೋರಾಗಿರುವ ನಡುವೆಯೇ, ರಾಜಕೀಯದಲ್ಲೂ ಸಂಕ್ರಾಂತಿ ಸಮಯದಲ್ಲಿ ಸ್ಥಾನ ಪಲ್ಲಟಗಳು ನಡೆಯುವುದು ಸಾಮಾನ್ಯವಾಗಿದೆ. ಕರ್ನಾಟಕದಲ್ಲಿ ಕಳೆದ ಎರಡು ವರ್ಷಗಳಿಂದ ಕಾಂಗ್ರೆಸ್ ಪಕ್ಷದೊಳಗೆ ಅಧಿಕಾರ ಹಂಚಿಕೆ ವಿಚಾರವಾಗಿ ಶೀತಲ ಸಮರ ಮುಂದುವರಿದಿರುವಂತೆಯೇ, ಇದೀಗ ಬಿಹಾರ ರಾಜಕೀಯದಲ್ಲೂ ಸಂಕ್ರಾಂತಿ ನೆಪದಲ್ಲಿ ಭಾರೀ ರಾಜಕೀಯ ಚಟುವಟಿಕೆಗಳು ಆರಂಭವಾಗಿವೆ.
ಬಿಹಾರದಲ್ಲಿ ದಹಿ-ಚೂಡಾ ಹಬ್ಬದ ಸಂದರ್ಭದಲ್ಲೇ ಕಾಂಗ್ರೆಸ್ ಪಕ್ಷದ ಆರು ಶಾಸಕರು ಪಕ್ಷದ ಕಾರ್ಯಕ್ರಮದಿಂದ ದೂರ ಉಳಿದಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ. ಈ ಬೆಳವಣಿಗೆ ಹಿನ್ನೆಲೆಯಲ್ಲಿ ಕಾಂಗ್ರೆಸ್ನೊಳಗಿನ ಅಸಮಾಧಾನ ಹಾಗೂ ಶಾಸಕರ ಪಕ್ಷಾಂತರದ ಸಾಧ್ಯತೆಗಳ ಕುರಿತು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆ ನಡೆಯುತ್ತಿದೆ.
ದಹಿ-ಚೂಡಾ ಔತಣಕೂಟಕ್ಕೆ ಗೈರು: ಅನುಮಾನಕ್ಕೆ ಕಾರಣ
ಸೋಮವಾರ ಬಿಹಾರ ಕಾಂಗ್ರೆಸ್ ಪಕ್ಷವು ಪಾಟ್ನಾದ ಸದಾಕತ್ ಆಶ್ರಮದಲ್ಲಿರುವ ರಾಜ್ಯ ಪ್ರಧಾನ ಕಚೇರಿಯಲ್ಲಿ ದಹಿ-ಚೂಡಾ (ಮೊಸರು–ಚುರ್ಮಾ) ಔತಣಕೂಟವನ್ನು ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ರಾಮ್ ಸೇರಿದಂತೆ ಹಲವು ಹಿರಿಯ ನಾಯಕರು ಭಾಗವಹಿಸಿದ್ದರು. ಆದರೆ ಕಾಂಗ್ರೆಸ್ನ ಆರು ಶಾಸಕರು ಮಾತ್ರ ಈ ಔತಣಕೂಟಕ್ಕೆ ಗೈರು ಹಾಜರಾಗಿದ್ದರು.
ಶಾಸಕರು ವೈಯಕ್ತಿಕ ಕಾರಣಗಳಿಂದ ಕಾರ್ಯಕ್ರಮಕ್ಕೆ ಹಾಜರಾಗಲು ಸಾಧ್ಯವಾಗಲಿಲ್ಲ ಎಂಬ ಸ್ಪಷ್ಟನೆ ನೀಡಲಾಗಿದ್ದರೂ, ರಾಜಕೀಯ ವಲಯದಲ್ಲಿ ಇದನ್ನು ಕೇವಲ ಕಾರಣವೆಂದು ಪರಿಗಣಿಸಲಾಗುತ್ತಿಲ್ಲ. ಈ ಗೈರುಹಾಜರಿ ಒಂದು ಸೂಕ್ಷ್ಮ ರಾಜಕೀಯ ತಂತ್ರಗಾರಿಕೆಯ ಭಾಗವೇ ಎಂಬ ಅನುಮಾನಗಳು ವ್ಯಕ್ತವಾಗುತ್ತಿವೆ.
ಜೆಡಿಯುನಿಂದ ಮುಕ್ತ ಆಹ್ವಾನ
ಕಾಂಗ್ರೆಸ್ ಶಾಸಕರ ಗೈರುಹಾಜರಿಯ ಬೆನ್ನಲ್ಲೇ, ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಪಕ್ಷವು ವಿರೋಧ ಪಕ್ಷದ ಶಾಸಕರಿಗೆ ಮುಕ್ತ ಆಹ್ವಾನ ನೀಡಿರುವುದು ರಾಜಕೀಯ ಚಟುವಟಿಕೆಗೆ ಮತ್ತಷ್ಟು ಇಂಧನ ಸುರಿದಿದೆ. ಬಿಜೆಪಿ, ಕಾಂಗ್ರೆಸ್ ಮತ್ತು ಆರ್ಜೆಡಿ ಶಾಸಕರ ಮೇಲೆ ಜೆಡಿಯು ನಿಗಾ ಇಟ್ಟಿದೆ ಎನ್ನಲಾಗುತ್ತಿದೆ.
ಜೆಡಿಯು ಕೋಟಾದಿಂದ ಸಚಿವರಾಗಿರುವ ಜಮಾ ಖಾನ್, ಕಾಂಗ್ರೆಸ್ ಶಾಸಕರಿಗೆ ಸ್ಪಷ್ಟ ಸಂದೇಶ ನೀಡಿದ್ದು, “ಯಾರಾದರೂ ಜೆಡಿಯು ಸೇರಲು ಬಯಸಿದರೆ ಅವರನ್ನು ಮುಕ್ತ ತೋಳುಗಳಿಂದ ಸ್ವಾಗತಿಸುತ್ತೇವೆ. ನಮ್ಮ ಪಕ್ಷದ ಬಾಗಿಲುಗಳು ಎಲ್ಲರಿಗೂ ತೆರೆದಿವೆ. ನಮ್ಮ ನಾಯಕತ್ವದೊಂದಿಗೆ ಕೆಲಸ ಮಾಡಲು ಹಲವರು ಬಯಸುತ್ತಾರೆ” ಎಂದು ಹೇಳಿದ್ದಾರೆ.
ಚಿರಾಗ್ ಪಾಸ್ವಾನ್ ಹೇಳಿಕೆ
ಇತ್ತ ಎಲ್ಜೆಪಿ (ರಾಮ್ ವಿಲಾಸ್) ಪಕ್ಷದ ಮುಖ್ಯಸ್ಥ ಚಿರಾಗ್ ಪಾಸ್ವಾನ್ ಕೂಡ ಈ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿ, “ಕಾಂಗ್ರೆಸ್ ಹಾಗೂ ಆರ್ಜೆಡಿ ಪಕ್ಷದ ಕೆಲ ಶಾಸಕರು ಈಗಾಗಲೇ ನನ್ನ ಹಾಗೂ ನನ್ನ ಪಕ್ಷದ ನಾಯಕರೊಂದಿಗೆ ಸಂಪರ್ಕದಲ್ಲಿದ್ದಾರೆ. ಯಾವುದೇ ಸಮಯದಲ್ಲೂ ಅವರು ಪಕ್ಷ ಬದಲಾಯಿಸುವ ಸಾಧ್ಯತೆ ಇದೆ” ಎಂದು ಹೇಳಿದ್ದಾರೆ.
ಬಿಜೆಪಿ ವ್ಯಂಗ್ಯ
ಪಾಟ್ನಾಗೆ ಆಗಮಿಸಿದ ಬಿಜೆಪಿ ಸಂಸದ ಸಂಜಯ್ ಜೈಸ್ವಾಲ್, ಕಾಂಗ್ರೆಸ್ ಶಾಸಕರ ಗೈರುಹಾಜರಿಯ ಬಗ್ಗೆ ಪ್ರತಿಕ್ರಿಯಿಸಿ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
“ಕಾಂಗ್ರೆಸ್ ಪಕ್ಷ ಈಗಾಗಲೇ ಕುಸಿತದ ಹಾದಿಯಲ್ಲಿದೆ. ಹೀಗಾಗಿ ದಹಿ-ಚೂಡಾ ಔತಣಕೂಟಕ್ಕೆ ಶಾಸಕರು ಬರದೇ ಇರುವುದು ದೊಡ್ಡ ವಿಷಯವೇ ಅಲ್ಲ. ಇದಕ್ಕೆ ರಾಹುಲ್ ಗಾಂಧಿಯೇ ಕಾರಣ. ಅವರು ವಿಯೆಟ್ನಾಂ ಪ್ರವಾಸದಲ್ಲಿದ್ದಾರೆ, ತೇಜಸ್ವಿ ಯಾದವ್ ಕೂಡ ವಿದೇಶದಲ್ಲಿದ್ದಾರೆ” ಎಂದು ವ್ಯಂಗ್ಯವಾಡಿದರು.
ಮುಂದೇನು?
ಒಟ್ಟಾರೆ, ಮಕರ ಸಂಕ್ರಾಂತಿ ಹಬ್ಬದ ಸಂಭ್ರಮದ ನಡುವೆ ಬಿಹಾರ ರಾಜಕೀಯದಲ್ಲಿ ಪಕ್ಷಾಂತರದ ಚರ್ಚೆಗಳು ಮತ್ತೆ ಜೀವ ಪಡೆದಿವೆ. ಕಾಂಗ್ರೆಸ್ನ ಆರು ಶಾಸಕರ ನಡೆ ಮುಂದಿನ ದಿನಗಳಲ್ಲಿ ರಾಜ್ಯ ರಾಜಕೀಯದ ದಿಕ್ಕನ್ನು ಬದಲಾಯಿಸುವುದೇ ಎಂಬುದು ಕಾದು ನೋಡಬೇಕಿದೆ.







