Home » ಅಂತಾರಾಷ್ಟ್ರೀಯ » ಭಾರತೀಯ ರಕ್ಷಣ ಪಡೆಗೆ ₹54000 ಕೋಟಿ ಮೌಲ್ಯದ ಶಸ್ತ್ರಾಸ್ತ್ರ ಖರೀದಿಗೆ ಒಪ್ಪಿಗೆ!

ಭಾರತೀಯ ರಕ್ಷಣ ಪಡೆಗೆ ₹54000 ಕೋಟಿ ಮೌಲ್ಯದ ಶಸ್ತ್ರಾಸ್ತ್ರ ಖರೀದಿಗೆ ಒಪ್ಪಿಗೆ!

ಹೊಸದಿಲ್ಲಿ: ರಕ್ಷಣ ಸಚಿವ ರಾಜನಾಥ್‌ ಸಿಂಗ್‌ ಭಾರತೀಯ ರಕ್ಷಣ ಪಡೆಗಳ ಸಾಮರ್ಥ್ಯವನ್ನು ಹೆಚ್ಚಿಸುವುದಕ್ಕಾಗಿ 54,000 ಕೋಟಿ ರೂ. ಮೌಲ್ಯದ ಶಸ್ತ್ರಾಸ್ತ್ರ ಮತ್ತು ರಕ್ಷಣ ಉತ್ಪನ್ನಗಳನ್ನು ಖರೀದಿ ಮಾಡಲು ರಕ್ಷಣ ಸ್ವಾಧೀನತಾ ಮಂಡಳಿ (ಡಿಎಸಿ) ಗುರುವಾರ ಒಪ್ಪಿಗೆ ನೀಡಿದೆ. ದೇಶಿಯವಾಗಿ ತಯಾರು ಮಾಡಲಾಗಿರುವ ಶಸ್ತ್ರಾಸ್ತ್ರಗಳ ಖರೀದಿಗೆ ಮುಂದಾಗಿರುವುದು ಈ ಬಾರಿಯ ವಿಶೇಷವಾಗಿದೆ.

ರಕ್ಷಣ ಉತ್ಪನ್ನಗಳನ್ನು ಖರೀದಿಗಾಗಿ 8 ಪ್ರಸ್ತಾವನೆಗಳನ್ನು ಪರಿಶೀಲಿಸಿದ ರಕ್ಷಣ ಸಚಿವ ರಾಜನಾಥ್‌ ಸಿಂಗ್‌ ನೇತೃತ್ವದ ಡಿಎಸಿ ಇವುಗಳಿಗೆ ಒಪ್ಪಿಗೆ ಸೂಚಿಸಿದ್ದು, ತಡ ಮಾಡದೇ ಪೂರೈಕೆ ಮಾಡಬೇಕು ಎಂದು ಹೇಳಿದೆ. ಈ ಖರೀದಿಯಲ್ಲಿ ಟಿ-90 ಟ್ಯಾಂಕರ್‌ಗಳಿಗೆ ಶಕ್ತಿಶಾಲಿ ಎಂಜಿನ್‌, ಜಲಾಂತರ್ಗಾಮಿಗಳಿಗೆ ವರುಣಾಸ್ತ್ರ ಟಾರ್ಪೆಡೋ ಮತ್ತು ಕಣ್ಗಾವಲು ವಿಮಾನಗಳಿಗೆ ಶಕ್ತಿಶಾಲಿ ವ್ಯವಸ್ಥೆಗಳನ್ನು ಖರೀದಿ ಮಾಡಲು ಒಪ್ಪಿಗೆ ನೀಡಲಾಗಿದೆ. 2025ನೇ ವರ್ಷವನ್ನು ಆಚರಣೆ ಮಾಡಲು ರಕ್ಷಣ ಸಚಿವಾಲಯ ಆರಂಭಿಸಿರುವ “ಸುಧಾರಣ ವರ್ಷ’ ಉಪಕ್ರಮದಡಿ ಈ ಖರೀದಿಗೆ ಒಪ್ಪಿಗೆ ನೀಡಲಾಗಿದೆ.

ಯಾವ ರಕ್ಷಣ ಪಡೆಗೆ ಏನು ಸಿಗಲಿದೆ?


ಭೂಸೇನೆ
ಟಿ-90 ಟ್ಯಾಂಕ್‌ಗಳ ಎಂಜಿನ್‌ ಸಾಮರ್ಥ್ಯವನ್ನು ಹೆಚ್ಚಳ ಮಾಡುವುದಕ್ಕಾಗಿ ಪ್ರಸ್ತುತ ಬಳಕೆಯಲ್ಲಿರುವ 1,000 ಎಚ್‌ಪಿ ಬದಲು 1,350 ಎಚ್‌ಪಿ ಎಂಜಿನ್‌ ಕೊಳ್ಳಲು ತೀರ್ಮಾನಿಸಲಾಗಿದೆ. ಇದು ಟ್ಯಾಂಕರ್‌ಗಳ ಚಾಲನಾ ಸಾಮರ್ಥ್ಯವನ್ನು ಹೆಚ್ಚಳ ಮಾಡಲಿದ್ದು ಎತ್ತರದ ಪ್ರದೇಶಗಳಲ್ಲಿ ಕಾರ್ಯನಿರ್ವಹಣೆಗೆ ಅನುಕೂಲವಾಗಲಿದೆ.

ನೌಕಾಪಡೆ
ಜಲಾಂತರ್ಗಾಮಿಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೆಚ್ಚಳ ಮಾಡುವುದಕ್ಕಾಗಿ ವರುಣಾಸ್ತ್ರ ಟಾರ್ಪೆಡೋಗಳನ್ನು ಖರೀದಿಸಲು ನಿರ್ಧರಿಸಲಾಗಿದೆ. ಸಾಗರದಾಳದಲ್ಲಿ ಜಲಾಂತರ್ಗಾಮಿಗಳ ಮೇಲೆ ಇದು ಹೆಚ್ಚು ನಿಖರವಾಗಿ ದಾಳಿ ನಡೆಸುವ ಸಾಮರ್ಥ್ಯವನ್ನು ಹೊಂದಿದೆ.

ವಾಯುಪಡೆ
ಕಣ್ಗಾವಲು ವಿಮಾನಗಳ ನಿಖರತೆಯನ್ನು ಹೆಚ್ಚಳ ಮಾಡುವುದಕ್ಕಾಗಿ ಅತ್ಯಂತ ವೇಗವಾಗಿ ಸೂಚನೆಯನ್ನು ನೀಡಬಲ್ಲ ವ್ಯವಸ್ಥೆಯನ್ನು ಇದರಲ್ಲಿ ಅಳವಡಿಸಲಾಗುತ್ತದೆ. ಆಗಸದಲ್ಲಿ ಪರಸ್ಪರ ಯುದ್ಧದಲ್ಲಿ ತೊಡಗಿದ್ದಾಗ ಶತ್ರು ಹಾರಿಸುವ ಕ್ಷಿಪಣಿಗಳ ದಾಳಿಯನ್ನು ಮೊದಲೇ ಗುರುತಿಸಲು ಇದು ನೆರವು ನೀಡುತ್ತದೆ.

ಈ ಸುದ್ದಿಗೆ ನಿಮ್ಮ ಪ್ರತಿಕ್ರಿಯೆಯನ್ನು ವಿಶ್ರಾಂತಿ ಮಾಡಿ

Leave a Comment

Share This