Home » ಉದ್ಯೋಗ » ಬ್ಯಾಕ್‌ಲಾಗ್ ಹುದ್ದೆಗಳ ಭರ್ತಿ ವರದಿ ತಕ್ಷಣ ಸಲ್ಲಿಸಲು ಶಿಕ್ಷಣ ಇಲಾಖೆಗೆ ಸೂಚನೆ

ಬ್ಯಾಕ್‌ಲಾಗ್ ಹುದ್ದೆಗಳ ಭರ್ತಿ ವರದಿ ತಕ್ಷಣ ಸಲ್ಲಿಸಲು ಶಿಕ್ಷಣ ಇಲಾಖೆಗೆ ಸೂಚನೆ

ಬೆಂಗಳೂರು: ಶಾಲಾ ಶಿಕ್ಷಣ ಇಲಾಖೆಯ ಅಧೀನದಲ್ಲಿರುವ ಸರ್ಕಾರಿ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆಗಳಲ್ಲಿನ ನೇರ ನೇಮಕಾತಿ ಹಾಗೂ ಮುಂಬಡ್ತಿ ಬ್ಯಾಕ್‌ಲಾಗ್ ಹುದ್ದೆಗಳನ್ನು ಗುರುತಿಸಿ ತ್ವರಿತವಾಗಿ ಭರ್ತಿ ಮಾಡಬೇಕು ಎಂದು ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗವು ಶಾಲಾ ಶಿಕ್ಷಣ ಇಲಾಖೆ ಆಯುಕ್ತರಿಗೆ ಪತ್ರ ಬರೆದಿದೆ.
1978ರಿಂದ 2003ರ ವರೆಗೆ ರಾಜ್ಯದ ನಾಲ್ಕು ವಿಭಾಗೀಯ ಕಚೇರಿಗಳ ಸಹ ನಿರ್ದೇಶಕರು ಹಾಗೂ 2003ರಿಂದ ರಾಜ್ಯದ 35 ಶೈಕ್ಷಣಿಕ ಜಿಲ್ಲೆಗಳ ಉಪ ನಿರ್ದೇಶಕರುಗಳು ಸರ್ಕಾರಿ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆಗಳಲ್ಲಿನ ನೇರ ನೇಮಕಾತಿ ಮತ್ತು ಮುಂಬಡ್ತಿ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ಆಯೋಗಕ್ಕೆ ಸಲ್ಲಿಸಬೇಕೆಂದು ಈಗಾಗಲೇ ಉಲ್ಲೇಖಿತ ಪತ್ರಗಳ ಮೂಲಕ ಸೂಚಿಸಲಾಗಿತ್ತು.
ಆದರೆ ಇದುವರೆಗೆ ಶಿರಸಿ, ಉಡುಪಿ, ರಾಮನಗರ ಹಾಗೂ ಬೀದರ್ ಶೈಕ್ಷಣಿಕ ಜಿಲ್ಲೆಗಳು ಮಾತ್ರ ಮಾಹಿತಿಯನ್ನು ಸಲ್ಲಿಸಿದ್ದು, ಉಳಿದ ಶೈಕ್ಷಣಿಕ ಜಿಲ್ಲೆಗಳು ಹಾಗೂ ನಾಲ್ಕು ವಿಭಾಗೀಯ ಕಚೇರಿಗಳು ಮಾಹಿತಿ ನೀಡಲು ವಿಳಂಬ ಮಾಡಿವೆ. ಈ ಕುರಿತು ಈಗಾಗಲೇ 10 ತಿಂಗಳುಗಳು ಕಳೆದಿವೆ ಎಂದು ಆಯೋಗ ಅಸಮಾಧಾನ ವ್ಯಕ್ತಪಡಿಸಿದೆ.
ಸರ್ಕಾರಕ್ಕೆ ವರದಿ ಸಲ್ಲಿಸುವುದು ಅಗತ್ಯವಾಗಿರುವುದರಿಂದ, ಸಂಬಂಧಪಟ್ಟ ಅಧಿಕಾರಿಗಳು ಸರ್ಕಾರಿ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆಗಳಲ್ಲಿನ
ನೇರ ನೇಮಕಾತಿ ವಿವರಗಳನ್ನು ಅನುಬಂಧ–1ರಲ್ಲಿ
ಮುಂಬಡ್ತಿ ವಿವರಗಳನ್ನು ಅನುಬಂಧ–2ರಲ್ಲಿ
ಸಂಪೂರ್ಣ ಮಾಹಿತಿಯೊಂದಿಗೆ ಸಲ್ಲಿಸುವಂತೆ ಹಾಗೂ ಅಗತ್ಯವಿದ್ದಲ್ಲಿ ಅಧಿಕಾರಿ ಅಥವಾ ಸಿಬ್ಬಂದಿಯನ್ನು ಆಯೋಗಕ್ಕೆ ನಿಯೋಜಿಸುವಂತೆ ಸೂಚನೆ ನೀಡುವಂತೆ ಶಾಲಾ ಶಿಕ್ಷಣ ಇಲಾಖೆ ಆಯುಕ್ತರನ್ನು ಆಯೋಗ ಕೋರಿದೆ.
ಈ ಬೆಳವಣಿಗೆಯಿಂದ ರಾಜ್ಯದ ಶಾಲಾ ಶಿಕ್ಷಣ ಇಲಾಖೆಯಲ್ಲಿನ ಬ್ಯಾಕ್‌ಲಾಗ್ ಹುದ್ದೆಗಳ ಭರ್ತಿ ಪ್ರಕ್ರಿಯೆ ವೇಗ ಪಡೆಯುವ ನಿರೀಕ್ಷೆ ವ್ಯಕ್ತವಾಗಿದೆ.

ಈ ಸುದ್ದಿಗೆ ನಿಮ್ಮ ಪ್ರತಿಕ್ರಿಯೆಯನ್ನು ವಿಶ್ರಾಂತಿ ಮಾಡಿ

Leave a Comment

Share This