Home » ಬೀದರ ಜಿಲ್ಲೆ » ಬೀದರ್ ನೆಲದಲ್ಲಿ ಶರಣ ಸಂಸ್ಕೃತಿಯ ಸಂಭ್ರಮ: ವಚನ ವಿಜಯೋತ್ಸವ

ಬೀದರ್ ನೆಲದಲ್ಲಿ ಶರಣ ಸಂಸ್ಕೃತಿಯ ಸಂಭ್ರಮ: ವಚನ ವಿಜಯೋತ್ಸವ

ಬಿದರ್‌: ಬಸವ ಸೇವಾ ಪ್ರತಿಷ್ಠಾನ ವತಿಯಿಂದ ಹಮ್ಮಿಕೊಂಡಿರುವ 24ನೇ ವಚನ ವಿಜಯೋತ್ಸವ ಕಾರ್ಯಕ್ರಮಕ್ಕೆ ನಗರದ ಬಸವಗಿರಿಯಲ್ಲಿ ಶುಕ್ರವಾರ ವಿಧ್ಯುಕ್ತ ಚಾಲನೆ ನೀಡಲಾಯಿತು. ವಚನ ಸಾಹಿತ್ಯ ಹಾಗೂ ಶರಣ ಪರಂಪರೆಯ ಮಹತ್ವವನ್ನು ಸಾರುವ ಈ ಕಾರ್ಯಕ್ರಮಕ್ಕೆ ವಿವಿಧ ರಾಜ್ಯಗಳ ಗಣ್ಯರು, ಸಾಹಿತಿಗಳು, ಸ್ವಾಮೀಜಿಗಳು ಹಾಗೂ ಶರಣ ಸಂಸ್ಕೃತಿಯ ಅಭಿಮಾನಿಗಳು ಸಾಕ್ಷಿಯಾದರು.
ಉದ್ಘಾಟನಾ ಸಮಾರಂಭದಲ್ಲಿ ಅನುಭಾವ ನೀಡಿದ ಸಾಹಿತಿ ಬಸವರಾಜ ಸಬರದ ಮಾತನಾಡಿ, ಸಮಾನತೆ ಶರಣತತ್ವದ ಜೀವಾಳವಾಗಿದ್ದು, ಸೌಹಾರ್ದತೆ ಲಿಂಗಾಯತ ಧರ್ಮದ ಮುಖ್ಯ ಗುರಿಯಾಗಿದೆ ಎಂದರು. ಈ ಎರಡರ ಬುನಾದಿಯ ಮೇಲೆ ಬಸವಾದಿ ಶರಣರು ಶರಣ ಧರ್ಮವನ್ನು ಕಟ್ಟಿದರು ಎಂದು ತಿಳಿಸಿದರು.
ಮಾನವೀಯತೆ, ಅಂತಃಕರಣ, ಕಾಯಕ, ದಾಸೋಹ ಶರಣರ ಜೀವನದ ಪ್ರಮುಖ ಮೌಲ್ಯಗಳಾಗಿದ್ದವು. ಜಾಗತಿಕ ಕ್ರಾಂತಿಗಳಲ್ಲಿ ಬಸವಣ್ಣನವರ ಕ್ರಾಂತಿ ಅತ್ಯಂತ ವಿಶಿಷ್ಟವಾದದ್ದು. ಬಸವಣ್ಣನವರು ಹಿಂಸೆ ಹಾಗೂ ಜೀವವಧೆಯನ್ನು ಎಂದಿಗೂ ಬೆಂಬಲಿಸಲಿಲ್ಲ ಎಂದು ಅವರು ಹೇಳಿದರು.
ಧರ್ಮವನ್ನು ಕ್ರಾಂತಿಯಾಗಿ ಮಾಡಿದ ಏಕೈಕ ವ್ಯಕ್ತಿ ಬಸವಣ್ಣ
ಬೀದರ್ ಬಸವಾದಿ ಶರಣರು ಮೆಟ್ಟಿದ ನೆಲ. ಧರ್ಮ ಮತ್ತು ಕ್ರಾಂತಿ ಎರಡೂ ಒಂದೇ ಕಡೆ ನಡೆಯುವುದಿಲ್ಲ. ಆದರೆ ಧರ್ಮವನ್ನು ಕ್ರಾಂತಿಯಾಗಿ ಮಾಡಿದ ಜಗತ್ತಿನ ಏಕೈಕ ವ್ಯಕ್ತಿ ಬಸವಣ್ಣ ಎಂದು ಬಸವರಾಜ ಸಬರದ ಅಭಿಪ್ರಾಯಪಟ್ಟರು.
ಬಸವಣ್ಣನವರ ಕ್ರಾಂತಿಗೆ ಶರಣರ ಹತ್ಯಾಕಾಂಡವೇ ಕಾರಣವಾಯಿತು. ಅನೇಕ ಶರಣರು ತಮ್ಮ ತ್ಯಾಗ ಹಾಗೂ ಬಲಿದಾನದಿಂದ ವಚನ ಸಾಹಿತ್ಯವನ್ನು ಉಳಿಸಿದರು. ಅದಕ್ಕಾಗಿ ಅವರು ಮರಣವನ್ನೇ ಮಹಾನವಮಿ ಎಂದು ಕರೆದರು. ಇಂದು ನಾವು ಅದನ್ನು ವಚನ ವಿಜಯೋತ್ಸವವಾಗಿ ಆಚರಿಸುತ್ತಿದ್ದೇವೆ ಎಂದರು.
ಬಸವ ಪುರಾಣದ ಮೂಲಕ ಸಂದೇಶ ಪ್ರಸಾರ
ಕಾರ್ಯಕ್ರಮವನ್ನು ಉದ್ಘಾಟಿಸಿದ ತೆಲಂಗಾಣದ ವಾರಂಗಲಿನ ಪಾಲ್ಕುರಿಕೆ ಸೋಮನಾಥ ಕಲಾ ಪೀಠದ ಅಧ್ಯಕ್ಷ ರಾಪುಲು ಸತ್ಯನಾರಾಯಣ ಮಾತನಾಡಿ, ಬಸವಣ್ಣನವರು ಇಷ್ಟಲಿಂಗದ ಮೂಲಕ ಭಕ್ತ ಮತ್ತು ದೇವರನ್ನು ಸಮೀಪಕ್ಕೆ ತಂದರು ಎಂದು ಹೇಳಿದರು.
ಪಾಲ್ಕುರಿಕೆ ಸೋಮನಾಥರು ‘ಬಸವ ಪುರಾಣ’ದ ಮೂಲಕ ಬಸವ ಸಂದೇಶಗಳನ್ನು ಜಗತ್ತಿಗೆ ಪ್ರಚುರಪಡಿಸಿದ್ದಾರೆ. ತೆಲುಗು ಭಾಷೆಯಲ್ಲಿ ಬಸವಣ್ಣನವರ ವಿಚಾರಗಳನ್ನು ಕಾವ್ಯ ರೂಪದಲ್ಲಿ ಬರೆದು ಸಾಹಿತ್ಯ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿ ಮಾಡಿದ್ದಾರೆ ಎಂದರು.
ಸರ್ಕಾರ ಸ್ಮಾರಕ ಅಭಿವೃದ್ಧಿಪಡಿಸಬೇಕು
ಪಾಲ್ಕುರಿಕೆ ಸೋಮನಾಥರು ಮಾಗಡಿ ತಾಲ್ಲೂಕಿನ ಕಲ್ಯಾ ಗ್ರಾಮದಲ್ಲಿ ನಿಧನರಾಗಿದ್ದು, ಆ ಸ್ಥಳವನ್ನು ಕರ್ನಾಟಕ ಸರ್ಕಾರ ಸ್ಮಾರಕವಾಗಿ ಅಭಿವೃದ್ಧಿಪಡಿಸಬೇಕು ಎಂದು ರಾಪುಲು ಸತ್ಯನಾರಾಯಣ ಮನವಿ ಮಾಡಿದರು.
ಬಸವಲಿಂಗ ಪಟ್ಟದ್ದೇವರು ಮಾತನಾಡಿ, ರಾಜ್ಯ ಸರ್ಕಾರ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕನೆಂದು ಘೋಷಿಸಿರುವುದು ಶ್ಲಾಘನೀಯ. 1ರಿಂದ 12ನೇ ತರಗತಿ ವರೆಗಿನ ಪಠ್ಯಗಳಲ್ಲಿ ಬಸವಾದಿ ಶರಣರ ವಿಚಾರಗಳನ್ನು ಸೇರಿಸಿದರೆ ಇನ್ನಷ್ಟು ಪ್ರಚಾರವಾಗುತ್ತದೆ ಎಂದರು.
‘ಪಂಚ ಜಗದ್ಗುರುಗಳಿಗೆ ಜ್ಞಾನೋದಯ’
ಸಾಹಿತಿ ಬಸವರಾಜ ಸಬರದ, ಪಂಚ ಜಗದ್ಗುರುಗಳು ಬಸವಣ್ಣನವರ ಇತಿಹಾಸವನ್ನು ತಿರುಚಲು ಪ್ರಯತ್ನಿಸಿದರು. ಆದರೆ ಈಗ ಅವರಿಗೆ ಜ್ಞಾನೋದಯವಾಗಿದೆ ಎಂದು ವ್ಯಂಗ್ಯವಾಡಿದರು. ಇವರ ವಿರೋಧದ ಕಾರಣದಿಂದಲೇ ಜಾಗತಿಕ ಲಿಂಗಾಯತ ಮಹಾಸಭಾ ಹುಟ್ಟಿಕೊಂಡಿತು ಎಂದು ಹೇಳಿದರು.
ಮಠಾಧೀಶರು ಬಸವಣ್ಣನವರನ್ನು ಒಪ್ಪಿಕೊಳ್ಳಬೇಕು
ಹುಲಸೂರಿನ ಗುರುಬಸವೇಶ್ವರ ಸಂಸ್ಥಾನ ಮಠದ ಶಿವಾನಂದ ಸ್ವಾಮೀಜಿ ಮಾತನಾಡಿ, ಬಸವಣ್ಣನ ತತ್ವ ಹೇಳುವವರಿಗೆ ನಾನು ಸಾಷ್ಟಾಂಗ ನಮಸ್ಕಾರ ಮಾಡುವೆ ಎಂದರು. ಎಲ್ಲ ಮಠಾಧೀಶರು ಬಸವಣ್ಣನವರನ್ನು ಧರ್ಮಗುರು ಎಂದು ಒಪ್ಪಿಕೊಳ್ಳಬೇಕು ಎಂದು ಆಗ್ರಹಿಸಿದರು.
ಬಸವಣ್ಣ ಇಷ್ಟಲಿಂಗದ ಜನಕ, ವಚನ ಸಾಹಿತ್ಯ ಧರ್ಮಗ್ರಂಥ. ಲಿಂಗಾಯತ ಸ್ವತಂತ್ರ ಧರ್ಮ. ಲಿಂಗಾಯತರೆನಿಸಿಕೊಂಡವರು ಇಷ್ಟಲಿಂಗ ಬಿಟ್ಟು ಬೇರೆ ಪೂಜೆ ಮಾಡಬಾರದು ಎಂದು ಹೇಳಿದರು.
ವಚನ ಸಾಹಿತ್ಯ ಎಂದೆಂದಿಗೂ ಜೀವಂತ
ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಬಸವ ಸೇವಾ ಪ್ರತಿಷ್ಠಾನದ ಗಂಗಾಂಬಿಕಾ ಅಕ್ಕ ಮಾತನಾಡಿ, ಪುರೋಹಿತಷಾಹಿಗಳು ವಚನ ಸಾಹಿತ್ಯವನ್ನು ಹಾಳುಗೆಡವಲು ನಿರಂತರ ಪ್ರಯತ್ನಿಸಿದರೂ ಶರಣತತ್ವವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಯಾರೂ ಹಾಳುಗೆಡವಲು ಸಾಧ್ಯವಿಲ್ಲ ಎಂದರು.
12ನೇ ಶತಮಾನದಲ್ಲಿ ವಚನ ಸಾಹಿತ್ಯಕ್ಕೆ ಬೆಂಕಿ ಇಡಲಾಯಿತು. ಶರಣರ ವಧೆ ನಡೆಯಿತು. ಆದರೆ ಅಕ್ಕನಾಗಮ್ಮ ಸೇರಿದಂತೆ ಶರಣರು ಎದೆಗುಂದದೆ ವಚನ ಸಾಹಿತ್ಯವನ್ನು ಸಂರಕ್ಷಿಸಿದರು ಎಂದು ಹೇಳಿದರು.
ಇಬ್ಬರು ಹೆಣ್ಣು ಮಕ್ಕಳು ಸ್ಥಾಪಿಸಿದ ಸಂಸ್ಥೆ ಇಷ್ಟೊಂದು ಎತ್ತರಕ್ಕೆ ಬೆಳೆದಿದೆ ಎಂದು ಹೇಳುತ್ತ ಗಂಗಾಂಬಿಕಾ ಅಕ್ಕ ಭಾವುಕರಾಗಿ ಕಣ್ಣೀರಾದರು. ಕಳೆದ 24 ವರ್ಷಗಳಿಂದ ವಚನ ವಿಜಯೋತ್ಸವ ನಡೆಸಿಕೊಂಡು ಬರಲಾಗುತ್ತಿದ್ದು ಇದು ನಾಡಹಬ್ಬವಾಗಿದೆ ಎಂದು ತಿಳಿಸಿದರು.
ವಿವಿಧ ಕಾರ್ಯಕ್ರಮಗಳು
ಸಭೆಯಲ್ಲಿ ಗುಣತೀರ್ಥವಾಡಿಯ ಬಸವಪ್ರಭು ಸ್ವಾಮೀಜಿ, ಕುರುಪತಿ ನೀಲಕಂಠೇಶ್ವರ ಪ್ರಸಾದ, ಕಸಾಪ ಅಧ್ಯಕ್ಷ ಸುರೇಶ ಚನಶೆಟ್ಟಿ, ಭಾಲ್ಕಿ ತಹಸೀಲ್ದಾರ್ ಮಹೇಶ ಪಾಟೀಲ, ಮಹಾನಗರ ಪಾಲಿಕೆ ಸದಸ್ಯ ರಾಜು ಚಿಂತಾಮಣಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವನಿತಾ ಗುಂಡಪ್ಪ ಬಳತೆ, ಡಾ. ದೇವಕಿ ಹಾಗೂ ಡಾ. ಅಶೋಕ ನಾಗೂರೆ ಗುರುಪೂಜೆ ನೆರವೇರಿಸಿದರು. ನೀಲಮ್ಮನ ಬಳಗದ ಶರಣೆಯರಿಂದ ಸಮೂಹ ಗಾಯನ ನಡೆಯಿತು. ನೃತ್ಯಾಂಗನ ನಾಟ್ಯ ಮತ್ತು ಕಲಾ ಕೇಂದ್ರದ ಕಲಾವಿದರು ವಚನ ನೃತ್ಯ ಪ್ರದರ್ಶಿಸಿದರು. ರಾಜಮತಿ ಗಂಗು ನಿರೂಪಿಸಿದರು, ಕರಣ ಪಾಟೀಲ ವಂದಿಸಿದರು.

ಈ ಸುದ್ದಿಗೆ ನಿಮ್ಮ ಪ್ರತಿಕ್ರಿಯೆಯನ್ನು ವಿಶ್ರಾಂತಿ ಮಾಡಿ

Leave a Comment

Share This