Home » ರಾಜ್ಯ » ಬೀದರ್ ಜಿಲ್ಲೆಗೆ ರೈಲು ನಿಲ್ದಾಣದ ಸಿಹಿಸುದ್ದಿ ಕೊಟ್ಟ ವಿ ಸೋಮಣ್ಣ: ಏನದು ಸ್ಪೆಷಲ್?

ಬೀದರ್ ಜಿಲ್ಲೆಗೆ ರೈಲು ನಿಲ್ದಾಣದ ಸಿಹಿಸುದ್ದಿ ಕೊಟ್ಟ ವಿ ಸೋಮಣ್ಣ: ಏನದು ಸ್ಪೆಷಲ್?

ಬೀದರ್ ರೈಲು ನಿಲ್ದಾಣದಲ್ಲಿ ಅಮೃತ ಭಾರತ್‌ ನಿಲ್ದಾಣ ಯೋಜನೆಯಡಿ ನಡೆಯುತ್ತಿರುವ ಪುನರಾಭಿವೃದ್ಧಿ ಕಾಮಗಾರಿಯನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವಂತೆ ಸಚಿವ ವಿ.ಸೋಮಣ್ಣ ಅಧಿಕಾರಿಗಳಿಗೆ ಸೂಚಿಸಿದ್ದಾರೆ. 24.35 ಕೋಟಿ ರೂ. ವೆಚ್ಚದಲ್ಲಿ ನಡೆಯುತ್ತಿರುವ ಕಾಮಗಾರಿಗಳ ಗುಣಮಟ್ಟವನ್ನು ಕಾಯ್ದುಕೊಳ್ಳಲು ಮತ್ತು ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಅವರು ನಿರ್ದೇಶನ ನೀಡಿದರು. ಸಚಿವರು ನಾಗಲಪಲ್ಲಿ-ಬೀದರ್ ವಿಭಾಗದಲ್ಲಿ ರೈಲು ಹಳಿಗಳ ಸುರಕ್ಷತಾ ತಪಾಸಣೆ ನಡೆಸಿದರು.

ಬೀದರ್‌: ಬೀದರ್‌ನ ರೈಲು ನಿಲ್ದಾಣದಲ್ಲಿಅಮೃತ ಭಾರತ್‌ ನಿಲ್ದಾಣ ಯೋಜನೆಯಡಿ ಕೈಗೆತ್ತಿಕೊಂಡ ನಿಲ್ದಾಣದ ಪುನರಾಭಿವೃದ್ಧಿ ಕಾಮಗಾರಿಯುವ ನಿಗಧಿತ ಅವಧಿಯೊಳಗೆ ಪೂರ್ಣಗೊಳಿಸಬೇಕು ಎಂದು ರಾಜ್ಯ ರೈಲ್ವೆ ಖಾತೆ ಹಾಗೂ ಜಲಶಕ್ತಿ ಸಚಿವ ವಿ.ಸೋಮಣ್ಣ ಅಧಿಕಾರಿಗಳಿಗೆ ಸೂಚಿಸಿದರು. ಈ ಮೂಲಕ ಕಾಮಗಾರಿಗೆ ಚುರುಕು ಸಿಕ್ಕಂತಾಗಿದೆ. ಇತ್ತೀಚೆಗಷ್ಟೇ ಅಮೃತ ಭಾರತ್ ಯೋಜನೆಯಡಿ ಸಿದ್ಧವಾದ ರೈಲು ನಿಲ್ದಾಣಗಳನ್ನು ಪ್ರಧಾನಿ ಮೋದಿ ಉದ್ಘಾಟಿಸಿದ್ದರು.

ಮೆಟ್ಟಿಕುಂಟಾದಲ್ಲಿ ರೈಲು ನಿಲ್ದಾಣ
ದಕ್ಷಿಣ ರೈಲ್ವೆ ವಿಭಾಗಕ್ಕೆ ಒಳಗೊಂಡ ನೆರೆಯ ತೆಲಂಗಾಣದ ಮೆಟ್ಟಿಕುಂಟಾದಲ್ಲಿ ಸುಮಾರು 50 ಕೋಟಿ ರೂ ವೆಚ್ಚದಲ್ಲಿ ಹೊಸ ರೈಲು ನಿಲ್ದಾಣ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಮೆಟ್ಟಿಕುಂಟಾಜೊತೆಗೆ ಬೀದರ್ ಜಿಲ್ಲೆಗೆ ಬರುವ 2 ರೈಲು ನಿಲ್ದಾಣಗಳು ನಿರ್ಮಿಸಲಾಗುತ್ತಿದೆ , ಇದಕ್ಕಾಗಿ ಈಗಾಗಲೇ ಎಲ್ಲಾ ಬೇಕಾಗಿರುವ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಸಚಿವ ವಿ ಸೋಮಣ್ಣ ಹೇಳಿದ್ದಾರೆ. .

24 ಕೋಟಿ ರೂ ವೆಚ್ಚದಲ್ಲಿ ಅಭಿವೃದ್ಧಿ
ಬೀದರ್‌ ರೈಲು ನಿಲ್ದಾಣದ ಪುನರಾಭಿವೃದ್ಧಿ ಮತ್ತು ಪ್ರಯಾಣಿಕರಿಗೆ ಲಭ್ಯವಿರುವ ಸೌಲಭ್ಯ ಗಳನ್ನು ಪರಿಶೀಲಿಸಿದ ಸಚಿವರು, ಕಾಮಗಾರಿ ಸಂದರ್ಭದಲ್ಲಿ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದಂತೆ ತೀವ್ರ ನಿಗಾ ಜತೆಗೆ ವಿಶೇಷ ಕಾಳಜಿ ವಹಿಸಬೇಕು. ನಿಯಮಿತವಾಗಿ ಸುರಕ್ಷತಾ ತಪಾಸಣೆ ನಡೆಸಬೇಕು ಎಂದು ಆದೇಶಿಸಿದರು. ಇಲ್ಲಿಅಮೃತ ಭಾರತ್‌ ನಿಲ್ದಾಣ ಯೋಜನೆ ಯಡಿ 24.35 ಕೋಟಿ ರೂ. ವೆಚ್ಚದಲ್ಲಿ ನಡೆಯುತ್ತಿರುವ ಕಾಮಗಾರಿಗಳ ಗುಣಮಟ್ಟ ಕಾಯ್ದು ಕೊಳ್ಳಬೇಕು. ಯಾವುದೇ ಕಳಪೆ ಕಾಮಗಾರಿ ನಡೆಯದಂತೆ ಕಟ್ಟೆಚ್ಚರ ವಹಿಸಬೇಕು ಎಂದರು.

ಬೀದರ್‌ ನಿಲ್ದಾಣದಲ್ಲಿ ನಡೆಯುತ್ತಿರುವ ಪುನರಾಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದರು. ನಿಲ್ದಾಣದಲ್ಲಿ ನಡೆಯುತ್ತಿರುವ 12 ಮೀಟರ್‌ ಅಗಲದ ಪಾದಚಾರಿ ಮೇಲ್ಸೇತುವೆ, ರ್ಯಾಂಪ್, ಲಿಫ್ಟ್‌ಗಳು, ಎಸ್ಕಲೇಟರ್‌ಗಳು, ಬುಕ್ಕಿಂಗ್‌ ಕೌಂಟರ್‌, ಪಾರ್ಕಿಂಗ್‌ ಮತ್ತು ಸುತ್ತ್ತಲಿನ ಪ್ರದೇಶಗಳ ಕಾಮಗಾರಿಗಳನ್ನು ಪರಿಶೀಲಿಸಿದರು. ಪ್ರಯಾಣಿಕರ ಸುಗಮ ಸಂಚಾರ, ಸುರಕ್ಷತೆ ಮತ್ತು ಭದ್ರತೆಗಾಗಿ ಅಧಿಕಾರಿಗಳು ಕೈಗೊಂಡ ಕ್ರಮಗಳನ್ನು ವಿಮರ್ಶಿಸಿದ ಸಚಿವರು, ಈ ಕಾಮಗಾರಿಗಳು ಗಮನಾರ್ಹ ರಚನಾತ್ಮಕ ಬದಲಾವಣೆಗಳನ್ನು ಒಳಗೊಂಡಿರುವುದರಿಂದ ಜನಸಂದಣಿ ನಿರ್ವಹಣೆ, ಭದ್ರತಾ ವ್ಯವಸ್ಥೆ ಮತ್ತು ಪ್ರಯಾಣಿಕರಿಗೆ ಸಹಾಯಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಜಾರಿಗೊಳಿಸಬೇಕು ಎಂದು ಸೂಚಿಸಿದರು

ಇದಕ್ಕೂ ಮುನ್ನ ಸಚಿವರು ಸಿಕಂದರಾಬಾದ್‌ ವಿಭಾಗದ ನಾಗಲಪಲ್ಲಿ-ಬೀದರ್‌ ವಿಭಾಗದಲ್ಲಿ ವಿಂಡೋ ತ್ರೈಲಿಂಗ್‌ ತಪಾಸಣೆ ನಡೆಸಿ ರೈಲು ಹಳಿಗಳ ಸುರಕ್ಷತಾ ಅಂಶಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದರು.

ಸಚಿವ ವಿ. ಸೋಮಣ್ಣ ಜತೆ ಎಂಬಿ ಪಾಟೀಲ್ ಮಾತುಕತೆ
ಬೆಂಗಳೂರು ರಾಜಧಾನಿಯಿಂದ ವಿಜಯಪುರ ಮತ್ತು ಬಾಗಲಕೋಟೆಗೆ ಸದ್ಯದ ರೈಲು ಪ್ರಯಾಣದ 15 ಗಂಟೆಗಳ ಅವಧಿಯನ್ನು 10 ಗಂಟೆಗಳಿಗೆ ಇಳಿಸುವ ಸಂಬಂಧ ವಿಜಯಪುರ ಜಿಲ್ಲಾಉಸ್ತುವಾರಿ ಸಚಿವ ಎಂ.ಬಿ.ಪಾಟೀಲ್‌ ಅವರು ರೈಲ್ವೆ ಖಾತೆ ಸಹಾಯಕ ಸಚಿವ ವಿ. ಸೋಮಣ್ಣ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದರು.

‘‘ಸದ್ಯ ವಿಜಯಪುರ, ಬಾಗಲಕೋಟೆಗೆ ಹೋಗುವ ರೈಲುಗಳು ಹುಬ್ಬಳ್ಳಿ ಮತ್ತು ಗದಗನಲ್ಲಿ ಎಂಜಿನ್‌ ಬದಲಿಸಿಕೊಳ್ಳಲು ಗಂಟೆಗಟ್ಟಲೆ ನಿಲ್ಲಬೇಕಾಗಿದೆ. ಎರಡೂ ಕಡೆ ಬೈಪಾಸ್‌ ಮೂಲಕ ರೈಲುಗಳು ಸಾಗಿಹೋಗುವ ವ್ಯವಸ್ಥೆ ಆಗಬೇಕು. ಇದರಿಂದ ಗದಗ ಭಾಗದ ಜನತೆಗೂ ಅನುಕೂಲವಾಗುತ್ತದೆ. ಒಂದು ವೇಳೆ, ಈಗಾಗಲೇ ಓಡಾಡುತ್ತಿರುವ ರೈಲುಗಳನ್ನು ಬೈಪಾಸ್‌ ಮೂಲಕ ಓಡಿಸುವುದು ಅಸಾಧ್ಯವಾದರೆ ಹೊಸ ರೈಲುಗಳ ಸೇವೆಯನ್ನಾದರೂ ಆರಂಭಿಸಬೇಕು,’’ ಎಂದು ಎಂ.ಬಿ.ಪಾಟೀಲ್‌ ಕೇಂದ್ರ ಸಚಿವರನ್ನು ಕೋರಿದ್ದಾರೆ. ‘‘ತಮ್ಮ ಬೇಡಿಕೆಗೆ ಸೋಮಣ್ಣ ಸ್ಪಂದಿಸಿದ್ದಾರೆ. ಸದ್ಯದಲ್ಲೇ ತಾವು ದಿಲ್ಲಿಗೆ ತೆರಳುತ್ತಿದ್ದು, ಕೇಂದ್ರ ಸಚಿವರು ಹಾಗೂ ರೈಲ್ವೆ ಅಧಿಕಾರಿಗಳನ್ನು ಭೇಟಿ ಮಾಡಿ ಮತ್ತೊಮ್ಮೆ ಸುದೀರ್ಘ ಚರ್ಚೆ ನಡೆಸುತ್ತೇನೆ,’’ ಎಂದು ಪಾಟೀಲ್‌ ತಿಳಿಸಿದ್ದಾರೆ.

ಈ ಸುದ್ದಿಗೆ ನಿಮ್ಮ ಪ್ರತಿಕ್ರಿಯೆಯನ್ನು ವಿಶ್ರಾಂತಿ ಮಾಡಿ

Leave a Comment

Share This