ಬೀದರ್:
ಬುಧವಾರ (ಡಿ.31) ರಾತ್ರಿ ಹೊಸ ವರ್ಷವನ್ನು ಅತ್ಯುತ್ಸಾಹದಿಂದ ಸ್ವಾಗತಿಸಲು ಜನತೆ ತುದಿಗಾಲ ಮೇಲೆ ನಿಂತಿದ್ದು, ಸ್ನೇಹಿತರ ಬಳಗ, ಸಂಘ–ಸಂಸ್ಥೆಗಳು, ಹೋಟೆಲ್ಗಳು ಹಾಗೂ ರೆಸಾರ್ಟ್ಗಳಲ್ಲಿ ಸಂಭ್ರಮಾಚರಣೆಗೆ ಸಕಲ ಸಿದ್ಧತೆಗಳು ನಡೆಯುತ್ತಿವೆ. ಈ ನಡುವೆ ಯಾವುದೇ ಅವಘಡಗಳು ನಡೆಯದಂತೆ ಹೊಸ ವರ್ಷಾಚರಣೆ ಶಾಂತಿ ಹಾಗೂ ಸುವ್ಯವಸ್ಥೆಯಿಂದ ನಡೆಯಲೆಂದು ಜಿಲ್ಲಾ ಪೊಲೀಸ್ ಇಲಾಖೆ ವ್ಯಾಪಕ ಸಿದ್ಧತೆಗಳನ್ನು ಕೈಗೊಂಡಿದೆ.
ನಗರ ಹಾಗೂ ಜಿಲ್ಲೆಯ ವಿವಿಧ ಬಡಾವಣೆಗಳಲ್ಲಿ ಹೊಸ ವರ್ಷಾಚರಣೆಗಾಗಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದ್ದು, ಹೋಟೆಲ್ ಹಾಗೂ ರೆಸಾರ್ಟ್ಗಳು ಎಂದಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಮದ್ಯದ ದಾಸ್ತಾನು ಮಾಡಿಕೊಂಡಿವೆ ಎಂದು ಮೂಲಗಳು ತಿಳಿಸಿವೆ. ಇದನ್ನು ಗಮನದಲ್ಲಿಟ್ಟುಕೊಂಡು ಅಕ್ರಮ ಮದ್ಯ ಮಾರಾಟ ಮತ್ತು ಸಾಗಾಟವನ್ನು ತಡೆಗಟ್ಟಲು ಅಬಕಾರಿ ಇಲಾಖೆ ವಿಶೇಷ ತಂಡಗಳನ್ನು ರಚಿಸಿ ನಿಗಾ ವಹಿಸಿದೆ.
ಇನ್ನೊಂದೆಡೆ, ಮದ್ಯ ಸೇವಿಸಿ ವಾಹನ ಚಲಾಯಿಸುವವರ ಮೇಲೆ ಜಿಲ್ಲಾ ಪೊಲೀಸ್ ಇಲಾಖೆ ಹದ್ದಿನ ಕಣ್ಣಿಟ್ಟಿದ್ದು, ಸಾರ್ವಜನಿಕ ಶಾಂತಿ ಭಂಗವಾಗದಂತೆ ತಡೆಯಲು ವಿಶೇಷ ತಂಡಗಳನ್ನು ನಿಯೋಜಿಸಿದೆ. ಬೀದರ್ ನಗರ, ತಾಲ್ಲೂಕು ಕೇಂದ್ರಗಳು ಹಾಗೂ ಪ್ರಮುಖ ಹೋಬಳಿ ಕೇಂದ್ರಗಳಲ್ಲಿ ಡಿಸೆಂಬರ್ 31ರ ರಾತ್ರಿ ಪೂರ್ತಿ ಪೊಲೀಸ್ ಗಸ್ತು ನಡೆಯಲಿದೆ.
1,700 ಸಿಬ್ಬಂದಿ ನಿಯೋಜನೆ
ಹೊಸ ವರ್ಷಾಚರಣೆ ವೇಳೆ ಪ್ಯಾಟ್ರೊಲಿಂಗ್ ಹಾಗೂ ಪಿಕೆಟ್ ವ್ಯವಸ್ಥೆಗಾಗಿ 1,700 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಜೊತೆಗೆ 2 ಕೆಎಸ್ಆರ್ಪಿ ತುಕಡಿ, 10 ಡಿಎಆರ್ ತುಕಡಿ, 200 ಗೃಹರಕ್ಷಕರು ಹಾಗೂ ಅಕ್ಕ ಪಡೆ ಸಿಬ್ಬಂದಿಯನ್ನು ಸಹ ಕರ್ತವ್ಯಕ್ಕೆ ನಿಯೋಜಿಸಲಾಗಿದೆ.
ಬೈಕ್ ಸೈಲೆನ್ಸರ್ ತೆಗೆದು ಓಡಿಸಿದರೆ ಕಠಿಣ ಕ್ರಮ
ಹೊಸ ವರ್ಷದಂದು ಪಡ್ಡೆ ಹುಡುಗರು ಹಾಗೂ ಯುವಕರು ಬೈಕ್ ಸೈಲೆನ್ಸರ್ ತೆಗೆದು ಮದ್ಯ ಸೇವಿಸಿ ವಾಹನ ಚಲಾಯಿಸುವ ಪ್ರವೃತ್ತಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ಕಠಿಣ ಕ್ರಮ ಕೈಗೊಳ್ಳಲು ಪೊಲೀಸರು ಮುಂದಾಗಿದ್ದಾರೆ. ಈ ರೀತಿ ನಿಯಮ ಉಲ್ಲಂಘಿಸುವವರ ವಾಹನಗಳನ್ನು ಜಪ್ತಿ ಮಾಡಲಾಗುವುದರ ಜೊತೆಗೆ, ಅವರ ಚಾಲನಾ ಪರವಾನಗಿಯನ್ನು (DL) ರದ್ದುಪಡಿಸಲು ಆರ್ಟಿಒಗೆ ಶಿಫಾರಸು ಮಾಡುವ ಯೋಜನೆಯೂ ಇದೆ.
ಎಸ್ಪಿ ಪ್ರದೀಪ್ ಗುಂಟಿ ಹೇಳಿಕೆ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಅವರು ಮಾತನಾಡಿ,
“ಹೊಸ ವರ್ಷವನ್ನು ಸಂಭ್ರಮದಿಂದ ಆಚರಿಸಲು ಯಾವುದೇ ನಿರ್ಬಂಧವಿಲ್ಲ. ಆದರೆ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ಬರದಂತೆ ಜನರು ಜವಾಬ್ದಾರಿಯಿಂದ ಆಚರಿಸಬೇಕು,” ಎಂದು ಮನವಿ ಮಾಡಿದ್ದಾರೆ.
ಹೋಟೆಲ್–ರೆಸಾರ್ಟ್ಗಳಿಗೆ ಪೊಲೀಸ್ ಸೂಚನೆಗಳು
ಹೊಸ ವರ್ಷಾಚರಣೆ ಕಾರ್ಯಕ್ರಮ ಆಯೋಜಿಸುವ ಹೋಟೆಲ್ ಹಾಗೂ ರೆಸಾರ್ಟ್ ಮಾಲೀಕರಿಗೆ ಜಿಲ್ಲಾ ಪೊಲೀಸ್ ಇಲಾಖೆ ಕೆಳಕಂಡ ಸೂಚನೆಗಳನ್ನು ನೀಡಿದೆ:
ಕಾರ್ಯಕ್ರಮ ಆಯೋಜನೆಗೆ ಪೂರ್ವಾನುಮತಿ ಕಡ್ಡಾಯ
ಮದ್ಯ ಮಾರಾಟಕ್ಕೆ ಅಬಕಾರಿ ಇಲಾಖೆಯ ನಿಯಮಾನುಸಾರ ಸಮಯ ಪಾಲನೆ
ನಿಗದಿತ ಸೌಂಡ್ ಸಿಸ್ಟಂ ಮಾತ್ರ ಬಳಸುವುದು
ಹೋಟೆಲ್/ರೆಸಾರ್ಟ್ ಮುಂದೆ ಸಾರ್ವಜನಿಕ ಸಂಚಾರಕ್ಕೆ ಅಡಚಣೆ ಆಗಬಾರದು
ಮಾದಕ ವಸ್ತುಗಳ ಬಳಕೆ ಸಂಪೂರ್ಣ ನಿಷೇಧ
ನಿಗದಿತ ಸಂಖ್ಯೆಗೆ ಮೀರಿದ ಜನಸಮೂಹ ಸೇರಿಸಬಾರದು
ಯಾವುದೇ ಆಯುಧಗಳನ್ನು ಇಟ್ಟುಕೊಳ್ಳಲು ಅಥವಾ ಪ್ರದರ್ಶಿಸಲು ಅವಕಾಶವಿಲ್ಲ
ಜನರ ಭದ್ರತೆಗೆ ಸೂಕ್ತ ವ್ಯವಸ್ಥೆ ಮಾಡಿಕೊಳ್ಳುವುದು
ಕಾರ್ಯಕ್ರಮ ಸ್ಥಳದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಕಡ್ಡಾಯ
ಜಿಲ್ಲೆಯಾದ್ಯಂತ ಹೊಸ ವರ್ಷಾಚರಣೆ ಶಾಂತಿ, ಸುರಕ್ಷತೆ ಮತ್ತು ಸೌಹಾರ್ದತೆಯಿಂದ ನಡೆಯಲೆಂದು ಪೊಲೀಸ್ ಹಾಗೂ ಅಬಕಾರಿ ಇಲಾಖೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿವೆ.







