Home » ಇತ್ತೀಚಿನ ಸುದ್ದಿ » ಬಡವರಿಗೆ ಮಾತ್ರ ‘ಗ್ಯಾರಂಟಿ’: ಯೋಜನೆಗಳ ಪುನರ್ ಪರಿಶೀಲನೆ ಸುಳಿವು ನೀಡಿದ ಗೃಹ ಸಚಿವ ಜಿ. ಪರಮೇಶ್ವರ್

ಬಡವರಿಗೆ ಮಾತ್ರ ‘ಗ್ಯಾರಂಟಿ’: ಯೋಜನೆಗಳ ಪುನರ್ ಪರಿಶೀಲನೆ ಸುಳಿವು ನೀಡಿದ ಗೃಹ ಸಚಿವ ಜಿ. ಪರಮೇಶ್ವರ್

ತುಮಕೂರ: ‘ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ಬಡವರಿಗೆ ಮಾತ್ರ ಸಿಗುವಂತಾಗಬೇಕು. ಆ ನಿಟ್ಟಿನಲ್ಲಿ ಗ್ಯಾರಂಟಿ ಯೋಜನೆಗಳ ಪುನರ್ ಪರಿಶೀಲಿಸಲು ಸರ್ಕಾರದ ಹಂತದಲ್ಲಿ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದ್ದಾರೆ.

ನಗರದಲ್ಲಿ ಸೋಮವಾರ ನಡೆದ ಕೆಡಿಪಿ ಸಭೆಯಲ್ಲಿ ಈ ವಿಚಾರ ಚರ್ಚೆಗೆ ಬಂದಾಗ ‘ಬಿಪಿಎಲ್ ಮಾನದಂಡ ಇಟ್ಟುಕೊಂಡು ಬಡವರಿಗೆ ಮಾತ್ರ ಗ್ಯಾರಂಟಿ ಯೋಜನೆಗಳ ಲಾಭ ಸಿಗುವಂತೆ ಮಾಡಬೇಕಿದೆ. ಈ ಬಗ್ಗೆ ಸಭೆಯಲ್ಲಿ ನಿರ್ಧಾರ ತೆಗೆದುಕೊಂಡು ಸರ್ಕಾರಕ್ಕೆ ಏಕೆ ಕಳುಹಿಸಬಾರದು’ ಎಂದು ಅವರು ಸಲಹೆ ಮಾಡಿದರು.

ವಿಷಯ ಪ್ರಸ್ತಾಪಿಸಿದ ಜೆಡಿಎಸ್ ಶಾಸಕ ಎಂ.ಟಿ.ಕೃಷ್ಣಪ್ಪ, ‘₹2 ಲಕ್ಷ ಸಂಬಳ ತೆಗೆದುಕೊಳ್ಳುವ ಮಹಿಳೆಯರು ಸಾರಿಗೆ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡುತ್ತಿದ್ದಾರೆ. ನಮ್ಮದು ಅಷ್ಟೊಂದು ಶ್ರೀಮಂತ ರಾಜ್ಯವೇ’ ಎಂದು ಪ್ರಶ್ನಿಸಿದರು.

ಇದಕ್ಕೆ ಧ್ವನಿಗೂಡಿಸಿದ ಸಚಿವರು, ‘ಇದೊಂದು ಗಂಭೀರ ವಿಚಾರ. ಗೃಹಲಕ್ಷ್ಮಿ ಯೋಜನೆಯಲ್ಲಿ ಶ್ರೀಮಂತರೂ ಸೌಲಭ್ಯ ಪಡೆದುಕೊಳ್ಳುತ್ತಿದ್ದು ಇದನ್ನು ತಪ್ಪಿಸಬೇಕಿದೆ’ ಎಂದು ಸಲಹೆ ಮಾಡಿದರು. ಕೃಷ್ಣಪ್ಪ ನೀಡಿದ ಸಲಹೆ ಒಪ್ಪುವುದಾದರೆ ಪರಿಷ್ಕರಿಸುವ ನಿರ್ಧಾರ ಕೈಗೊಳ್ಳೋಣ ಎಂದರು.

ಆಗ ಮಧ್ಯೆ ಪ್ರವೇಶಿಸಿದ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿ.ಸುರೇಶ್‌ಬಾಬು, ‘ಸರ್ಕಾರದ ಬಳಿ ಹಣ ಇಲ್ಲವಾಗಿದೆ. ಗ್ಯಾರಂಟಿ ಯೋಜನೆಗೆ ಹಣ ಹೊಂದಿಸಲಾಗದೆ ಯೋಜನೆಯ ಸೌಲಭ್ಯ ಕಡಿತ ಮಾಡಲು ಮುಂದಾಗಿದೆ’ ಎಂದು ಕಾಲೆಳೆದರು. ಆಗ ತಿಪಟೂರು ಶಾಸಕ ಕೆ.ಷಡಕ್ಷರಿ, ‘ಐದು ವರ್ಷ ಐದು ಗ್ಯಾರಂಟಿ ಕೊಡುತ್ತೇವೆ ಎಂದು ಹೇಳಿದ್ದೇವೆ. ಯಾವುದೇ ಕಾರಣಕ್ಕೂ ನಿಲ್ಲಿಸಬಾರದು’ ಎಂದು ಆಗ್ರಹಿಸಿದರು.

ಸಭೆಯಲ್ಲಿ ಪರ, ವಿರೋಧ ವ್ಯಕ್ತವಾಗಿದ್ದರಿಂದ ಚರ್ಚೆಯನ್ನು ಹೆಚ್ಚು ಸಮಯ ಮುಂದುವರಿಸಲಿಲ್ಲ. ‘ಸರ್ಕಾರದ ಹಂತದಲ್ಲಿ ನಿರ್ಧರಿಸಲಾಗುವುದು’ ಎಂದು ಹೇಳಿ ವಿಷಯಾಂತರ ಮಾಡಿದರು.

ಗ್ಯಾರಂಟಿಗಳ ಕುರಿತು ಕೇಳಿ ಬರುತ್ತಿರುವ ಪ್ರಶ್ನೆಗಳಿಗೆ ಸರ್ಕಾರವು ಬಜೆಟ್‌ನಲ್ಲಿ ಉತ್ತರಿಸಲಿದೆ. ಗೃಹಜ್ಯೋತಿ ಗೃಹಲಕ್ಷ್ಮಿ ಯೋಜನೆಗಳ ಹಣ ಬಿಡುಗಡೆ ಮಾಡುತ್ತೇವೆ. ಯಾರಿಗೂ ಯಾವ ಸ್ವರೂಪದಲ್ಲೂ ತೊಂದರೆ ಆಗದಂತೆ ಕ್ರಮ ವಹಿಸುತ್ತೇವೆ. ಈಗಿನ ಗ್ಯಾರಂಟಿ ವ್ಯವಸ್ಥೆ ಬದಲಾಗದು’ ಎಂದು ಹೇಳಿದರು.

Source : ಪ್ರಜಾವಾಣಿ

ಈ ಸುದ್ದಿಗೆ ನಿಮ್ಮ ಪ್ರತಿಕ್ರಿಯೆಯನ್ನು ವಿಶ್ರಾಂತಿ ಮಾಡಿ

Leave a Comment

Share This