Home » ರಾಜ್ಯ » ಪರಿಶಿಷ್ಟ ಪಂಗಡಗಳ ಒಳಮೀಸಲಾತಿಗೂ ಗಟ್ಟಿ ಹೆಜ್ಜೆ ಅಗತ್ಯ: ಶಾಂತಾರಾಮ ಸಿದ್ದಿ

ಪರಿಶಿಷ್ಟ ಪಂಗಡಗಳ ಒಳಮೀಸಲಾತಿಗೂ ಗಟ್ಟಿ ಹೆಜ್ಜೆ ಅಗತ್ಯ: ಶಾಂತಾರಾಮ ಸಿದ್ದಿ

ಬೆಂಗಳೂರು: ಪರಿಶಿಷ್ಟ ಜಾತಿಗಳ ಒಳಮೀಸಲಾತಿಯಂತೆ ಪರಿಶಿಷ್ಟ ಪಂಗಡಗಳ ಒಳಮೀಸಲಾತಿ ವರ್ಗೀಕರಣದಲ್ಲಿಯೂ ಕರ್ನಾಟಕ ಸರ್ಕಾರ ಗಟ್ಟಿ ನಿರ್ಧಾರ ಕೈಗೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಒತ್ತಾಯಿಸಿದರು.
ಪರಿಶಿಷ್ಟ ಪಂಗಡಗಳ ಒಳಮೀಸಲಾತಿ ಹೋರಾಟ ಸಮಿತಿಯ ದಕ್ಷಿಣ ಕನ್ನಡ–ಉಡುಪಿ ಜಿಲ್ಲೆಗಳ ಘಟಕವು ಬುಡಕಟ್ಟು ಸಮುದಾಯಗಳ ನಾಯಕರೊಂದಿಗೆ ಭಾನುವಾರ ಆಯೋಜಿಸಿದ್ದ ಸಮಾಲೋಚನಾ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2024ರ ಆಗಸ್ಟ್‌ 1ರಂದು ಸುಪ್ರೀಂ ಕೋರ್ಟ್ ನೀಡಿದ ಏಳು ಸದಸ್ಯರ ಸಂವಿಧಾನ ಪೀಠದ ಐತಿಹಾಸಿಕ ತೀರ್ಪು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಒಳಮೀಸಲಾತಿಗೆ ರಾಜ್ಯ ಸರ್ಕಾರಗಳಿಗೆ ಅಧಿಕಾರ ನೀಡಿದೆ ಎಂದು ಹೇಳಿದರು.
ರಾಜ್ಯ ಸರ್ಕಾರ ಪರಿಶಿಷ್ಟ ಜಾತಿಗಳ ಒಳಮೀಸಲಾತಿಗೆ ಮಾತ್ರ ಆದ್ಯತೆ ನೀಡಿ, ಪರಿಶಿಷ್ಟ ಪಂಗಡಗಳ ಒಳಮೀಸಲಾತಿಯನ್ನು ಕಡೆಗಣಿಸಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನ್ಯಾ. ನಾಗಮೋಹನ ದಾಸ್ ಆಯೋಗದ ಶಿಫಾರಸಿನಂತೆ ಪರಿಶಿಷ್ಟ ಪಂಗಡಗಳನ್ನೂ ಪರಿಗಣಿಸಬೇಕಿತ್ತು ಎಂದರು.
2011ರ ಜನಗಣತಿಯ ಪ್ರಕಾರ ರಾಜ್ಯದಲ್ಲಿ 50 ಪರಿಶಿಷ್ಟ ಪಂಗಡ ಜಾತಿಗಳಿದ್ದು, ಒಟ್ಟು ಜನಸಂಖ್ಯೆ 42.48 ಲಕ್ಷವಾಗಿದೆ. ಇದರಲ್ಲಿ ವಾಲ್ಮೀಕಿ ಸಮುದಾಯದವರೇ 32.96 ಲಕ್ಷ ಇದ್ದು, ಉಳಿದ 49 ಜಾತಿಗಳ ಜನಸಂಖ್ಯೆ ಕೇವಲ 9.52 ಲಕ್ಷ ಮಾತ್ರವಾಗಿದೆ. ಅನೇಕ ಸಣ್ಣ ಮತ್ತು ಅತಿ ಸಣ್ಣ ಬುಡಕಟ್ಟು ಜಾತಿಗಳಿಗೆ ನ್ಯಾಯ ಸಿಗಬೇಕಾದರೆ ಒಳಮೀಸಲಾತಿ ಅನಿವಾರ್ಯ ಎಂದು ಅವರು ತಿಳಿಸಿದರು.
ಪರಿಶಿಷ್ಟ ಪಂಗಡಗಳ ವರ್ಗೀಕರಣಕ್ಕಾಗಿ ನಿಖರ ದತ್ತಾಂಶ ಸಂಗ್ರಹ, ಹಿಂದುಳಿತ ಅಧ್ಯಯನ ಮತ್ತು ಸಮಾನ–ಅಸಮಾನ ವರ್ಗಗಳ ಪ್ರತ್ಯೇಕತೆ ಅಗತ್ಯವಿದ್ದು, ಈ ಉದ್ದೇಶಕ್ಕಾಗಿ ಸರ್ಕಾರ ಪ್ರತ್ಯೇಕ ಆಯೋಗ ರಚಿಸಬೇಕು ಎಂದು ಶಾಂತಾರಾಮ ಸಿದ್ದಿ ಆಗ್ರಹಿಸಿದರು.
ಸಭೆಯಲ್ಲಿ ಉಡುಪಿ–ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಒಳಮೀಸಲಾತಿ ಹೋರಾಟಕ್ಕೆ ಬೆಂಬಲ ಸೂಚಿಸಿದರು. ರಾಜ್ಯ ಲ್ಯಾಂಪ್ಸ್ ಮಹಾಮಂಡಲ ಅಧ್ಯಕ್ಷ ಬಿ. ಕಾವೇರ, ನಿವೃತ್ತ ಐಎಫ್‌ಎಸ್ ಅಧಿಕಾರಿ ಕೆ. ಸುಂದರ ನಾಯ್ಕ್, ಹೈಕೋರ್ಟ್ ವಕೀಲ ಪ್ರವೀಣ್ ಕುಮಾರ್ ಮುಗುಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಈ ಸುದ್ದಿಗೆ ನಿಮ್ಮ ಪ್ರತಿಕ್ರಿಯೆಯನ್ನು ವಿಶ್ರಾಂತಿ ಮಾಡಿ

Leave a Comment

Share This