Home » ಬೀದರ ಜಿಲ್ಲೆ » ಪಟ್ಟಣದಲ್ಲಿ ಲೋಕಾಯುಕ್ತ ದಾಳಿ: ಕಚೇರಿಗಳ ಅವ್ಯವಸ್ಥೆ ಬಯಲು – ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಎಚ್ಚರಿಕೆ

ಪಟ್ಟಣದಲ್ಲಿ ಲೋಕಾಯುಕ್ತ ದಾಳಿ: ಕಚೇರಿಗಳ ಅವ್ಯವಸ್ಥೆ ಬಯಲು – ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಎಚ್ಚರಿಕೆ

ಹುಲಸೂರ :ಪಟ್ಟಣದ ತಹಶೀಲ್ದಾರ್ ಕಚೇರಿ, ತಾಲೂಕು ಪಂಚಾಯಿತಿ, ಸಮುದಾಯ ಆರೋಗ್ಯ ಕೇಂದ್ರ, ಗ್ರಾಮ ಪಂಚಾಯಿತಿ, ಡಾ. ಅಂಬೇಡ್ಕರ್ ಬಾಲಕರ ವಸತಿ ನಿಲಯ ಹಾಗೂ ಮೊರಾರ್ಜಿ ದೇಸಾಯಿ ವಸತಿ ನಿಲಯ ಸೇರಿದಂತೆ ವಿವಿಧ ಸರ್ಕಾರಿ ಕಚೇರಿ ಮತ್ತು ಸಂಸ್ಥೆಗಳಿಗೆ ಲೋಕಾಯುಕ್ತ ಅಧಿಕಾರಿಗಳ ತಂಡ ಅಚ್ಚರಿ ಭೇಟಿ ನೀಡಿ ಸಮಗ್ರ ಪರಿಶೀಲನೆ ನಡೆಸಿತು.
ಪರಿಶೀಲನೆ ವೇಳೆ ಹಲವು ಕಚೇರಿಗಳಲ್ಲಿ ಗಂಭೀರ ಅವ್ಯವಸ್ಥೆ, ನಿರ್ಲಕ್ಷ್ಯ ಹಾಗೂ ಕರ್ತವ್ಯಲೋಪ ಕಂಡುಬಂದಿದ್ದು, ಸಂಬಂಧಪಟ್ಟ ಅಧಿಕಾರಿಗಳನ್ನು ಲೋಕಾಯುಕ್ತ ಅಧಿಕಾರಿಗಳು ತರಾಟೆಗೆ ತೆಗೆದುಕೊಂಡರು. ಈ ಸಂದರ್ಭ ಮಾತನಾಡಿದ ಅಧಿಕಾರಿಗಳು, ಪರಿಶೀಲನೆಯಲ್ಲಿ ಕಂಡುಬಂದ ಲೋಪಗಳಿಗೆ ಕಾರಣರಾದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಮುದಾಯ ಆರೋಗ್ಯ ಕೇಂದ್ರದಲ್ಲಿ ಗಂಭೀರ ಲೋಪಗಳು
ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಲೋಕಾಯುಕ್ತ ತಂಡ, ಅವಧಿ ಮೀರಿದ ಔಷಧಿಗಳ ಸಂಗ್ರಹ, ನೈರ್ಮಲ್ಯದ ಕೊರತೆ, ರೋಗಿಗಳಿಗೆ ನೀಡಲಾಗುತ್ತಿರುವ ಮೂಲ ಸೌಲಭ್ಯಗಳ ಅಭಾವ, ಸಮಯ ಪಾಲನೆ ಮಾಡದ ವೈದ್ಯರು, ಸಿಬ್ಬಂದಿ ಕೊರತೆ ಸೇರಿದಂತೆ ಹಲವಾರು ಅಂಶಗಳನ್ನು ಪರಿಶೀಲಿಸಿತು. ಆಸ್ಪತ್ರೆಯ ಪರಿಸ್ಥಿತಿಗೆ ಅಸಮಾಧಾನ ವ್ಯಕ್ತಪಡಿಸಿದ ಅಧಿಕಾರಿಗಳು, ಸಾರ್ವಜನಿಕರ ಆರೋಗ್ಯದ ವಿಚಾರದಲ್ಲಿ ಯಾವುದೇ ನಿರ್ಲಕ್ಷ್ಯ ಸಹಿಸಲಾಗದು ಎಂದು ಸ್ಪಷ್ಟಪಡಿಸಿದರು.
ವಸತಿ ಶಾಲೆಗಳಲ್ಲಿ ಪರಿಶೀಲನೆ
ಬಳಿಕ ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ ಡಾ. ಅಂಬೇಡ್ಕರ್ ಬಾಲಕರ ವಸತಿ ನಿಲಯಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳ ಹಾಜರಾತಿ, ದಾಖಲಾತಿ ವಹಿಗಳು ಹಾಗೂ ಮಕ್ಕಳ ಮೂಲಭೂತ ಸೌಲಭ್ಯಗಳ ಕುರಿತು ಮಾಹಿತಿ ಪಡೆದರು. ಈ ವೇಳೆ ವಿದ್ಯಾರ್ಥಿಗಳಿಗೆ ಭ್ರಷ್ಟಾಚಾರ ವಿರೋಧಿ ಅರಿವು ಮೂಡಿಸಿ, ಯಾವುದೇ ಅಕ್ರಮ ಕಂಡುಬಂದರೆ ಧೈರ್ಯವಾಗಿ ದೂರು ನೀಡುವಂತೆ ಸಲಹೆ ನೀಡಿದರು.
ಅಂಗವಿಕಲರ ಅನುದಾನ ದುರುಪಯೋಗ ಆರೋಪ
ಹುಲಸೂರ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿದ ಲೋಕಾಯುಕ್ತ ಅಧಿಕಾರಿಗಳು, ಅಂಗವಿಕಲರ ಅಭಿವೃದ್ಧಿಗೆ ಮೀಸಲಿಟ್ಟ ಅನುದಾನದ ಬಳಕೆಯ ಕುರಿತು ಮಾಹಿತಿ ಪಡೆದರು. 13 ಮತ್ತು 14ನೇ ಹಣಕಾಸು ಆಯೋಗದ ಅನುದಾನದ ಅಡಿಯಲ್ಲಿ ಮೀಸಲಿಟ್ಟ ಹಣವನ್ನು ಯಾವ ರೀತಿಯಲ್ಲಿ ವೆಚ್ಚ ಮಾಡಲಾಗಿದೆ? ಎಷ್ಟು ಹಣ ಮೀಸಲಿಡಲಾಗಿತ್ತು ಎಂದು ಪಿಡಿಒ ಅವರನ್ನು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪಿಡಿಒ, “ಆನ್‌ಲೈನ್ ತಂತ್ರಾಂಶಗಳಲ್ಲಿ ಈ ಕುರಿತು ಯಾವುದೇ ಮಾಹಿತಿ ಲಭ್ಯವಿಲ್ಲ. ಲಿಖಿತ ದಾಖಲೆಗಳೂ ನಮ್ಮ ಬಳಿ ಇಲ್ಲ. 2021ರಿಂದ 2025ನೇ ಸಾಲಿನ 15ನೇ ಹಣಕಾಸು ಆಯೋಗದ ಅಡಿಯಲ್ಲಿ ₹10.48 ಲಕ್ಷ ಮಾತ್ರ ಜಮೆ ಆಗಿದೆ” ಎಂದು ಹೇಳಿದರು.
‘ಉಳಿದ ಹಣ ಎಲ್ಲಿ?’ – ಅಂಗವಿಕಲರ ಸಂಘ ಪ್ರಶ್ನೆ
ಈ ವೇಳೆ ಅಂಗವಿಕಲರ ಸಂಘದ ಅಧ್ಯಕ್ಷ ಶಾಂತಕುಮಾರ ಮುಕ್ತಾ ಮಾತನಾಡಿ, “ಸುಮಾರು 15 ವರ್ಷಗಳಿಂದ ಅಂಗವಿಕಲರ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ಸರಿಯಾಗಿ ಬಳಕೆ ಮಾಡಿಲ್ಲ. ಈ ಕುರಿತು ಅನೇಕ ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಒಟ್ಟು ₹28 ಲಕ್ಷ ಇರಬೇಕಾಗಿತ್ತು. ಆದರೆ ₹10.48 ಲಕ್ಷ ಮಾತ್ರ ಉಳಿದಿದೆ. ಉಳಿದ ಹಣ ಎಲ್ಲಿ ಹೊಯಿತು?” ಎಂದು ಪ್ರಶ್ನಿಸಿದರು.
ಅಂಗವಿಕಲರ ಅಭಿವೃದ್ಧಿಗೆ ಮೀಸಲಿಟ್ಟ ಅನುದಾನದಿಂದಲೇ ಸಮುದಾಯ ಭವನ ನಿರ್ಮಿಸಬೇಕು ಎಂದು ಲೋಕಾಯುಕ್ತ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಲೋಕಾಯುಕ್ತ ಅಧಿಕಾರಿಗಳ ಭರವಸೆ
ಪರಿಶೀಲನೆಯ ನಂತರ ಮಾತನಾಡಿದ ಲೋಕಾಯುಕ್ತ ಡಿವೈಎಸ್‌ಪಿ ಅರುಣಕುಮಾರ, ದಾಖಲೆಗಳ ಪರಿಶೀಲನೆ ನಡೆಸಿ ಅನುದಾನ ದುರುಪಯೋಗ ಅಥವಾ ಅಕ್ರಮ ಕಂಡುಬಂದಲ್ಲಿ ಸಂಬಂಧಪಟ್ಟವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಲೋಕಾಯುಕ್ತ ಡಿವೈಎಸ್‌ಪಿ ಅರುಣಕುಮಾರ ಹಾಗೂ ಅವರ ತಂಡದ ಸದಸ್ಯರು ಉಪಸ್ಥಿತರಿದ್ದರು.

ಈ ಸುದ್ದಿಗೆ ನಿಮ್ಮ ಪ್ರತಿಕ್ರಿಯೆಯನ್ನು ವಿಶ್ರಾಂತಿ ಮಾಡಿ

Leave a Comment

Share This