ಔರಾದ್ ಪಟ್ಟಣದ ಬಹುಜನ ಜನ ಸಂಪರ್ಕ ಕಾರ್ಯಾಲಯದಲ್ಲಿ ಆದರ್ಶಮಾತೆ ರಾಜಾಮಾತೆ ಜೀಜಾಬಾಯಿ ಹಾಗೂ ಯುಗಪ್ರವರ್ತಕ ಸ್ವಾಮಿ ವಿವೇಕಾನಂದರ ಜನ್ಮದಿನದ ಅಂಗವಾಗಿ ಗೌರವ ನಮನ ಕಾರ್ಯಕ್ರಮವನ್ನು ಅತ್ಯಂತ ಭಕ್ತಿಭಾವದಿಂದ ಹಾಗೂ ವಿಜೃಂಭಣೆಯಿಂದ ಆಚರಿಸಲಾಯಿತು. ಸಮಾಜದಲ್ಲಿ ನೈತಿಕ ಮೌಲ್ಯಗಳು, ರಾಷ್ಟ್ರೀಯ ಚಿಂತನೆ ಹಾಗೂ ಮಾನವೀಯತೆ ಬೆಳೆಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪೂಜ್ಯ ಭಂತೆಜಿಯವರು ವಹಿಸಿ ಆಶೀರ್ವಚನ ನೀಡಿದರು. ಅವರು ತಮ್ಮ ಪ್ರವಚನದಲ್ಲಿ, ರಾಜಾಮಾತೆ ಜೀಜಾಬಾಯಿಯವರು ಶಿವಾಜಿ ಮಹಾರಾಜರನ್ನು ರೂಪಿಸಿದ ಆದರ್ಶ ತಾಯಿ ಮಾತ್ರವಲ್ಲದೆ, ಸ್ವಾಭಿಮಾನ, ಧೈರ್ಯ ಮತ್ತು ನ್ಯಾಯದ ಮೌಲ್ಯಗಳನ್ನು ಮಕ್ಕಳಲ್ಲಿ ಬೆಳೆಸಿದ ಮಹಾನ್ ವ್ಯಕ್ತಿತ್ವವಾಗಿದ್ದಾರೆ ಎಂದು ತಿಳಿಸಿದರು. ಅದೇ ರೀತಿಯಲ್ಲಿ ಸ್ವಾಮಿ ವಿವೇಕಾನಂದರು ಭಾರತವನ್ನು ಜಾಗತಿಕ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ ಯುಗಪುರುಷರಾಗಿದ್ದು, “ಎದ್ದು ನಿಲ್ಲಿ, ಗುರಿ ತಲುಪುವವರೆಗೆ ನಿಲ್ಲಬೇಡಿ” ಎಂಬ ಅವರ ಸಂದೇಶ ಇಂದಿಗೂ ಯುವಕರಿಗೆ ಶಕ್ತಿಯ ಮೂಲವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಿಸಿಎಂ (ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರು) ಇಲಾಖೆಯ ತಾಲೂಕು ಅಧಿಕಾರಿಗಳು ಉಪಸ್ಥಿತರಿದ್ದು, ಸರ್ಕಾರ ಸಮಾಜ ಸುಧಾರಣೆ ಹಾಗೂ ಸಮಾನತೆಯ ದಾರಿಯಲ್ಲಿ ಸಾಗಲು ಇಂತಹ ಮಹಾನ್ ವ್ಯಕ್ತಿಗಳ ಜೀವನ ಮತ್ತು ಚಿಂತನೆಗಳನ್ನು ಜನಸಾಮಾನ್ಯರಿಗೆ ಪರಿಚಯಿಸುವುದು ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ವಿಶೇಷ ಉಪನ್ಯಾಸಕರಾಗಿ ಭಾಗವಹಿಸಿದ್ದ ಕನ್ನಡ ದಿನಪತ್ರಿಕೆಯ ವರದಿಗಾರರಾದ ಶ್ರೀ ಪರಮೇಶ್ವರ್ ವಿಳಾಸಪೂರೆ ಅವರು ಮಾತನಾಡಿ, ರಾಜಾಮಾತೆ ಜೀಜಾಬಾಯಿಯವರ ಶಿಸ್ತು, ತ್ಯಾಗ ಮತ್ತು ಸಂಸ್ಕಾರಗಳು ಮರಾಠಾ ಸಾಮ್ರಾಜ್ಯದ ನಿರ್ಮಾಣಕ್ಕೆ ಅಡಿಪಾಯವಾಗಿದ್ದವು. ಸ್ವಾಮಿ ವಿವೇಕಾನಂದರು ಯುವಶಕ್ತಿಯನ್ನು ರಾಷ್ಟ್ರಶಕ್ತಿಯಾಗಿ ರೂಪಿಸುವ ಕನಸು ಕಂಡಿದ್ದರೆಂದು ವಿವರಿಸಿದರು. ಇಂದಿನ ಯುವಕರು ಶಿಕ್ಷಣ, ಶ್ರಮ ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ತಮ್ಮ ಜೀವನದ ಧ್ಯೇಯವನ್ನಾಗಿ ಮಾಡಿಕೊಂಡರೆ ಮಾತ್ರ ಬಲಿಷ್ಠ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು.
ಸಮಾಜಿಕ ಯುವ ಹೋರಾಟಗಾರರಾದ ರಾಹುಲ ಖಂದಾರೆ ಅವರು ಮಾತನಾಡಿ, ಜೀಜಾಬಾಯಿ ಮತ್ತು ವಿವೇಕಾನಂದರ ಆದರ್ಶಗಳು ಕೇವಲ ಜಯಂತಿ ಆಚರಣೆಗೆ ಸೀಮಿತವಾಗದೆ, ನೆಲಮಟ್ಟದಲ್ಲಿ ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಶೋಷಿತರ ಹಕ್ಕುಗಳಿಗಾಗಿ ಹೋರಾಟದ ರೂಪದಲ್ಲಿ ಜಾರಿಯಾಗಬೇಕೆಂದು ಕರೆ ನೀಡಿದರು. ಯುವಕರು ಸಂಘಟಿತರಾಗಿ ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವುದು ಅತ್ಯಂತ ಅಗತ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತಾಲೂಕು ದಲಿತ ಸಂಘರ್ಷ ಸಮಿತಿಯ ಸಂಚಾಲಕರಾದ ಸುಭಾಸ್ ಲಾಧಾ, ಸಿದ್ದಾರ್ಥ್ ಭೋಸಲೆ, ಅಖಿಲೇಶ್ ಸಾಗರ್, ಪ್ರಕಾಶ್ ಕಾಂಬಳೆ, ಪ್ರವೀಣ್ ಕಾರಂಜೆ, ದಿನೇಶ್ ಶಿಂದೆ, ಸಂತೋಷ್ ಸೂರ್ಯವಂಶಿ, ಸುಂದರ್ ಮೇತ್ರೆ, ಅನಿಲ್ ಬುಜಂಗೆ, ಸಂತೋಷ್ ಕೆ. ಸಿಂಧೆ, ನಾಗನಾಥ್ ವಾಕುಡೆ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದ ಅಂಗವಾಗಿ ರಾಜಾಮಾತೆ ಜೀಜಾಬಾಯಿ ಹಾಗೂ ಸ್ವಾಮಿ ವಿವೇಕಾನಂದರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಸಲ್ಲಿಸಿ ಗೌರವ ನಮನ ಅರ್ಪಿಸಲಾಯಿತು. ಬಳಿಕ ಸಮಾಜದಲ್ಲಿ ಶಾಂತಿ, ಸೌಹಾರ್ದತೆ, ಸಮಾನತೆ ಹಾಗೂ ಸಹೋದರತ್ವವನ್ನು ಕಾಪಾಡುವ ಸಂಕಲ್ಪವನ್ನು ಕೈಗೊಳ್ಳಲಾಯಿತು. ಕಾರ್ಯಕ್ರಮವು ಶಿಸ್ತುಬದ್ಧವಾಗಿ ಹಾಗೂ ಅರ್ಥಪೂರ್ಣವಾಗಿ ಸಂಪನ್ನಗೊಂಡಿತು.







