Home » ರಾಜ್ಯ » ಜಿಲ್ಲಾಧಿಕಾರಿಗಳಿಗೆ ಚುನಾವಣೆ ಸೂಚನೆ

ಜಿಲ್ಲಾಧಿಕಾರಿಗಳಿಗೆ ಚುನಾವಣೆ ಸೂಚನೆ

ಬೆಂಗಳೂರು:2026–31ನೇ ಸಾಲಿನ ಗ್ರಾಮ ಪಂಚಾಯತ್‌ಗಳ ಸಾರ್ವತ್ರಿಕ ಚುನಾವಣೆಗೆ ಅಗತ್ಯ ಪೂರ್ವಸಿದ್ಧತೆಗಳನ್ನು ಈಗಿನಿಂದಲೇ ಕೈಗೊಳ್ಳುವಂತೆ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ನಿರ್ದೇಶಕರು ಸೂಚನೆ ನೀಡಿದ್ದಾರೆ.
ಈ ಸಂಬಂಧ ಸುತ್ತೋಲೆ ಹೊರಡಿಸಿರುವ ಅವರು, 2020–25ನೇ ಅವಧಿಗೆ ರಚನೆಯಾಗಿರುವ ಗ್ರಾಮ ಪಂಚಾಯತ್‌ಗಳ ಅವಧಿಯು 2026ರ ಜನವರಿಯಿಂದ ಕ್ರಮೇಣ ಪೂರ್ಣಗೊಳ್ಳಲು ಆರಂಭವಾಗಲಿದೆ. ಅವಧಿ ಮುಕ್ತಾಯಗೊಳ್ಳುವ ಗ್ರಾಮ ಪಂಚಾಯತ್‌ಗಳಿಗೆ 2026ರ ಡಿಸೆಂಬರ್ ತಿಂಗಳಲ್ಲಿ ಸಾರ್ವತ್ರಿಕ ಚುನಾವಣೆಯನ್ನು ನಡೆಸಬೇಕಾಗಿರುವುದರಿಂದ, ಅಗತ್ಯ ಸಿದ್ಧತೆಗಳನ್ನು ನಿಗದಿತ ಕಾಲಮಿತಿಯಲ್ಲಿ ಪೂರ್ಣಗೊಳಿಸುವಂತೆ ತಿಳಿಸಿದ್ದಾರೆ.
ಚುನಾವಣೆ ನಡೆಸುವ ಉದ್ದೇಶದಿಂದ ಕನಿಷ್ಠ ಆರು ತಿಂಗಳು ಮುಂಚಿತವಾಗಿ ಮತದಾರರ ಪಟ್ಟಿ ತಯಾರಿ, ಮುದ್ರಣ ಸೇರಿದಂತೆ ಇತರ ಎಲ್ಲಾ ಪೂರ್ವಭಾವಿ ಸಿದ್ಧತೆಗಳನ್ನು ರಾಜ್ಯ ಚುನಾವಣಾ ಆಯೋಗ ಕೈಗೊಳ್ಳಬೇಕಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತದಿಂದ ಅಗತ್ಯ ಸಹಕಾರ ಅತ್ಯಂತ ಅವಶ್ಯಕವಾಗಿದೆ ಎಂದು ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ.
ಮೀಸಲಾತಿ ಅಧಿಸೂಚನೆಗೆ ಒತ್ತು
ಗ್ರಾಮ ಪಂಚಾಯತ್ ಚುನಾವಣೆಗೆ ಸಂಬಂಧಿಸಿದಂತೆ ಮಹಿಳೆಯರು, ಎಸ್‌ಸಿ, ಎಸ್‌ಟಿ ಹಾಗೂ ಹಿಂದುಳಿದ ವರ್ಗಗಳಿಗೆ ಅನ್ವಯಿಸುವ ಮೀಸಲಾತಿ ಕುರಿತ ಅಧಿಸೂಚನೆಯನ್ನು ನಿಗದಿತ ಕಾಲಮಿತಿಯೊಳಗೆ ಹೊರಡಿಸಿ, ಅದರ ಪ್ರತಿಗಳನ್ನು ರಾಜ್ಯ ಚುನಾವಣಾ ಆಯೋಗಕ್ಕೆ ಒದಗಿಸುವಂತೆ ಚುನಾವಣಾ ಆಯುಕ್ತರು ಕೋರಿದ್ದಾರೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಚುನಾವಣೆ ಪ್ರಕ್ರಿಯೆ ಸುಗಮವಾಗಿ ನಡೆಯುವಂತೆ ಕ್ಷೇತ್ರವಾರು ಮಾಹಿತಿ ಸಂಗ್ರಹ, ಆಡಳಿತಾತ್ಮಕ ವ್ಯವಸ್ಥೆ, ಸಿಬ್ಬಂದಿ ನಿಯೋಜನೆ ಹಾಗೂ ಇತರೆ ತಾಂತ್ರಿಕ ಸಿದ್ಧತೆಗಳನ್ನೂ ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.
ಗ್ರಾಮೀಣ ಮಟ್ಟದ ಆಡಳಿತ ವ್ಯವಸ್ಥೆಯಲ್ಲಿ ಗ್ರಾಮ ಪಂಚಾಯತ್‌ಗಳು ಪ್ರಮುಖ ಪಾತ್ರವಹಿಸುವುದರಿಂದ, ಚುನಾವಣಾ ಪ್ರಕ್ರಿಯೆ ಪಾರದರ್ಶಕವಾಗಿ ಹಾಗೂ ಸಮಯಬದ್ಧವಾಗಿ ನಡೆಯುವಂತೆ ಎಲ್ಲಾ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ನಿರ್ದೇಶಕರು ಸೂಚಿಸಿದ್ದಾರೆ.

ಈ ಸುದ್ದಿಗೆ ನಿಮ್ಮ ಪ್ರತಿಕ್ರಿಯೆಯನ್ನು ವಿಶ್ರಾಂತಿ ಮಾಡಿ

Leave a Comment

Share This