Home » ಬೀದರ ಜಿಲ್ಲೆ » ಜನವರಿ 24ರಿಂದ 26ರವರೆಗೆ ಬೀದರ್‌ನಲ್ಲಿ ವೀರಲೋಕ ಪುಸ್ತಕ ಸಂತೆನೂರಕ್ಕೂ ಹೆಚ್ಚು ಲೇಖಕರ ಭಾಗವಹಣೆ – 30ಕ್ಕೂ ಅಧಿಕ ವೇದಿಕೆ ಕಾರ್ಯಕ್ರಮಗಳು

ಜನವರಿ 24ರಿಂದ 26ರವರೆಗೆ ಬೀದರ್‌ನಲ್ಲಿ ವೀರಲೋಕ ಪುಸ್ತಕ ಸಂತೆನೂರಕ್ಕೂ ಹೆಚ್ಚು ಲೇಖಕರ ಭಾಗವಹಣೆ – 30ಕ್ಕೂ ಅಧಿಕ ವೇದಿಕೆ ಕಾರ್ಯಕ್ರಮಗಳು

ಬೀದರ್ :ಬರುವ ಜನವರಿ 24ರಿಂದ 26ರವರೆಗೆ ನಗರದಲ್ಲಿ ವೀರಲೋಕ ಪುಸ್ತಕ ಸಂತೆ ಆಯೋಜಿಸಲು ತೀರ್ಮಾನಿಸಲಾಗಿದೆ. ನಗರದ ವಿದ್ಯಾ ನಗರದ ಡಾ. ಚನ್ನಬಸವ ಪಟ್ಟದ್ದೇವರ ಪ್ರಸಾದ ನಿಲಯದ ಆವರಣದಲ್ಲಿ ಈ ಪುಸ್ತಕ ಸಂತೆ ನಡೆಯಲಿದೆ. ಈ ಕುರಿತು ನಡೆದ ಪುಸ್ತಕ ಸಂತೆಯ ಪೂರ್ವಭಾವಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.
ಸಭೆಯಲ್ಲಿ ಮಾತನಾಡಿದ ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು, ಪುಸ್ತಕ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಭಾಲ್ಕಿಯ ಹಿರೇಮಠ ಸಂಸ್ಥಾನವು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಸಹಯೋಗದೊಂದಿಗೆ ವೀರಲೋಕ ಪುಸ್ತಕ ಸಂತೆ ಆಯೋಜಿಸುತ್ತಿದೆ ಎಂದು ತಿಳಿಸಿದರು. ಪ್ರತಿಯೊಬ್ಬರೂ ಈ ಪುಸ್ತಕ ಸಂತೆಯಲ್ಲಿ ಭಾಗವಹಿಸಿ ಅದನ್ನು ಯಶಸ್ವಿಗೊಳಿಸಬೇಕೆಂದು ಅವರು ಮನವಿ ಮಾಡಿದರು.
ಬೆಂಗಳೂರಿನ ಪುಸ್ತಕ ಸಂತೆಯಲ್ಲಿ ಭಾಗವಹಿಸಿ ಅಲ್ಲಿನ ಅಚ್ಚುಕಟ್ಟುತನ ಮತ್ತು ಯಶಸ್ಸನ್ನು ಕಣ್ತುಂಬಿಕೊಂಡಿರುವುದಾಗಿ ತಿಳಿಸಿದ ಅವರು, ಬೆಂಗಳೂರು ಪುಸ್ತಕ ಸಂತೆಯನ್ನು ಮೀರಿಸುವಂತಹ ಸಂತೆಯನ್ನು ಬೀದರ್‌ನಲ್ಲಿ ಆಯೋಜಿಸುವ ಗುರಿ ಹೊಂದಲಾಗಿದೆ ಎಂದರು. ಈ ನಿಟ್ಟಿನಲ್ಲಿ ಮಠದ ಭಕ್ತಾದಿಗಳು ಹಾಗೂ ಸಮಸ್ತ ಕನ್ನಡಾಭಿಮಾನಿಗಳು ಪುಸ್ತಕ ಸಂತೆಯ ಆಯೋಜನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು.
ಪುಸ್ತಕ ಸಂತೆಯ ರೂವಾರಿ ಗುರುನಾಥ ರಾಜಗೀರ ಮಾತನಾಡಿ, ಬೀದರ್ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಪ್ರಕಾಶಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ಮಾಡಬೇಕು ಎಂದು ಹೇಳಿದರು. ಕಲ್ಯಾಣ ಕರ್ನಾಟಕ ಭಾಗದ ಲೇಖಕರು ತಮ್ಮ ಕೃತಿಗಳನ್ನು ಬಿಡುಗಡೆಗೊಳಿಸಲು ಆಸಕ್ತರಾಗಿದ್ದರೆ, ವೀರಲೋಕ ಪುಸ್ತಕ ಸಂತೆಯಲ್ಲಿ ವೇದಿಕೆ ಹಾಗೂ ಅತಿಥಿಗಳನ್ನು ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ವೀರಲೋಕ ಪುಸ್ತಕ ಸಂತೆಯಲ್ಲಿ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟದ ಜೊತೆಗೆ ಮೂರು ದಿನಗಳ ಕಾಲ ವಿವಿಧ ಗೋಷ್ಠಿಗಳು, ಸಂವಾದಗಳು ನಡೆಯಲಿವೆ. ಪ್ರತಿದಿನ ಸಂಜೆ ವಚನ ಗಾಯನ, ಭಾವಗೀತೆ, ಜಾನಪದ ಗೀತೆ ಹಾಗೂ ಗಜಲ್ ಗಾಯನ ಕಾರ್ಯಕ್ರಮಗಳು ನಡೆಯಲಿದ್ದು, ಒಟ್ಟು 30ಕ್ಕೂ ಹೆಚ್ಚು ವೇದಿಕೆ ಕಾರ್ಯಕ್ರಮಗಳು ಆಯೋಜಿಸಲಾಗುತ್ತವೆ ಎಂದು ಅವರು ವಿವರಿಸಿದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಸುರೇಶ ಚನಶೆಟ್ಟಿ ಮಾತನಾಡಿ, ಬೀದರ್‌ನಲ್ಲಿ ನಡೆಯಲಿರುವ ಈ ವೀರಲೋಕ ಪುಸ್ತಕ ಸಂತೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ನೂರಕ್ಕೂ ಹೆಚ್ಚು ಲೇಖಕರು ಭಾಗವಹಿಸಲಿದ್ದು, ಓದುಗರೊಂದಿಗೆ ನೇರ ಸಂವಾದಕ್ಕೆ ಅವಕಾಶ ಕಲ್ಪಿಸಲಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ ಕೋಸಂಬೆ, ಜಾನಪದ ಅಕಾಡೆಮಿ ಸದಸ್ಯ ವಿಜಯಕುಮಾರ ಸೋನಾರೆ, ವನ್ಯಜೀವಿ ಮಂಡಳಿ ಸದಸ್ಯ ವಿನಯ್ ಕುಮಾರ್ ಮಾಳಗೆ, ಬಸವರಾಜ ಧನ್ನೂರ, ಜೈರಾಜ ಖಂಡ್ರೆ, ರೇವಣಸಿದ್ದಪ್ಪ ಜಲಾದೆ, ಕಲ್ಯಾಣರಾವ ಪಾಟೀಲ, ಶರತ ಅಭಿಮಾನ, ಮಹೇಶ ಗೋರನಾಳಕರ, ಗುರುನಾಥ ಅಕ್ಕಣ್ಣ, ವಿಜಯಕುಮಾರ ಗೌರೆ, ಲೋಕೇಶ ಉಡಬಾಳೆ, ಎಸ್.ಎಸ್. ಹೊಡಮನಿ, ಉಮಾಕಾಂತ ಮೀಸೆ, ಯೋಗೇಂದ್ರ ಯದಲಾಪೂರೆ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು.
ಕನ್ನಡ ಪುಸ್ತಕ ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ ಹಾನಗಲ್ ಮಾತನಾಡಿ, ರಾಜ್ಯದಲ್ಲಿ ಪುಸ್ತಕ ಸಂತೆ ಉಂಟುಮಾಡಿರುವ ಸಂಚಲನ ಅತ್ಯಂತ ದೊಡ್ಡದು. ಅದೇ ರೀತಿಯ ಸಂಚಲನ ಬೀದರ್ ಜಿಲ್ಲೆಯಲ್ಲಿಯೂ ಸೃಷ್ಟಿಯಾಗಬೇಕಿದೆ ಎಂದು ಅಭಿಪ್ರಾಯಪಟ್ಟರು.

ಈ ಸುದ್ದಿಗೆ ನಿಮ್ಮ ಪ್ರತಿಕ್ರಿಯೆಯನ್ನು ವಿಶ್ರಾಂತಿ ಮಾಡಿ

Leave a Comment

Share This