Home » ರಾಜ್ಯ » ಜನನ–ಮರಣ ಪ್ರಮಾಣ ಪತ್ರಗಳು ಸಕಾಲದಲ್ಲಿ ಸಿಗಬೇಕು: ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ

ಜನನ–ಮರಣ ಪ್ರಮಾಣ ಪತ್ರಗಳು ಸಕಾಲದಲ್ಲಿ ಸಿಗಬೇಕು: ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ

ಕೊಪ್ಪಳ:ಬದುಕಿರುವ ಪ್ರತಿಯೊಬ್ಬ ವ್ಯಕ್ತಿಗೆ ಜನನ ಪ್ರಮಾಣ ಪತ್ರ ಅತ್ಯಂತ ಅಗತ್ಯವಾದ ದಾಖಲೆಯಾಗಿದ್ದು, ವ್ಯಕ್ತಿಯ ಮರಣದ ನಂತರ ಕುಟುಂಬದವರಿಗೆ ಮರಣ ಪ್ರಮಾಣಪತ್ರ ಉಪಯುಕ್ತ ದಾಖಲೆ ಆಗಿದೆ. ಆದ್ದರಿಂದ ಜನನ ಮತ್ತು ಮರಣ ಪ್ರಮಾಣ ಪತ್ರಗಳು ಜನರಿಗೆ ಸಕಾಲದಲ್ಲಿ ಲಭ್ಯವಾಗುವಂತೆ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಅವರು ಸೂಚಿಸಿದರು.
ಅವರು ಶುಕ್ರವಾರ ಕೊಪ್ಪಳ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಸಾಂಖ್ಯಿಕ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ನಾಗರಿಕ ನೋಂದಣಿ ಪದ್ಧತಿಯ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜನನ–ಮರಣ ನೋಂದಣಿ ಅಧಿನಿಯಮ–1969 ಹಾಗೂ ಕರ್ನಾಟಕ ಜನನ–ಮರಣ ನೋಂದಣಿ ನಿಯಮಗಳು–1999ರನ್ವಯ ಜನನ, ಮರಣ ಹಾಗೂ ನಿರ್ಜೀವ ಜನನಗಳ ನೋಂದಣಿ ಕಡ್ಡಾಯವಾಗಿದ್ದು, ನಿಗದಿತ ಅವಧಿಯೊಳಗೆ ಯಾವುದೇ ಶುಲ್ಕವಿಲ್ಲದೆ ನೋಂದಣಿ ಮಾಡಲು ಅವಕಾಶವಿದೆ. ಈ ಅವಧಿಯೊಳಗೆ ಎಲ್ಲಾ ಮಾಹಿತಿಯನ್ನು ಸಂಬಂಧಿತ ತಂತ್ರಾಂಶದಲ್ಲಿ ದಾಖಲಿಸಬೇಕು ಎಂದು ಹೇಳಿದರು.
2024ರ ತಿದ್ದುಪಡಿ ನಿಯಮಗಳಂತೆ ಜನನ–ಮರಣ ನೋಂದಣಿಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು. ಶೇ.100ರಷ್ಟು ಜನನ, ಮರಣ ಹಾಗೂ ನಿರ್ಜೀವ ಜನನಗಳ ನೋಂದಣಿ ಆಗಿರುವುದನ್ನು ಪರಿಶೀಲನೆ ನಡೆಸಬೇಕು. ವಿಳಂಬ ನೋಂದಣಿ ಪ್ರಕರಣಗಳನ್ನು ತಡೆಯುವತ್ತ ವಿಶೇಷ ಗಮನ ಹರಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯ ಎಲ್ಲಾ ಗ್ರಾಮ ಲೆಕ್ಕಿಗರು, ವೈದ್ಯಾಧಿಕಾರಿಗಳು ಹಾಗೂ ನಗರಸಭೆ ಪೌರಾಯುಕ್ತರು ಜನನ–ಮರಣ ನೋಂದಣಿ ಕಾರ್ಯವನ್ನು ಜವಾಬ್ದಾರಿಯಿಂದ ನಿರ್ವಹಿಸಬೇಕು. ಯಾವುದೇ ದಾಖಲಾತಿ ಬಾಕಿ ಉಳಿಯದಂತೆ ಶೇ.100ರಷ್ಟು ನೋಂದಣಿ ಆಗುವಂತೆ ಕ್ರಮವಹಿಸಬೇಕು ಎಂದು ಅವರು ತಿಳಿಸಿದರು.
ಸಭೆಯಲ್ಲಿ ಮಾತನಾಡಿದ ಜಿಲ್ಲಾ ಸಾಂಖ್ಯಿಕ ಸಂಗ್ರಹಣಾಧಿಕಾರಿ ಪ್ರಕಾಶ್ ಪಿ. ದೇಶಪಾಂಡೆ ಅವರು, ಜನನ ಹಾಗೂ ಮರಣ ನೋಂದಣಿ ಕಡ್ಡಾಯವಾಗಿದ್ದು, 21 ದಿನಗಳೊಳಗೆ ಯಾವುದೇ ಶುಲ್ಕವಿಲ್ಲದೆ ನೋಂದಣಿ ಮಾಡಬಹುದು ಎಂದರು. 2024ರ ತಿದ್ದುಪಡಿ ನಿಯಮದಂತೆ ಹೆಚ್ಚುವರಿ ಜನನ–ಮರಣ ಪ್ರಮಾಣ ಪತ್ರಗಳಿಗೆ ರೂ.50 ಶುಲ್ಕ ನಿಗದಿಪಡಿಸಲಾಗಿದೆ.
ವಿಳಂಬ ನೋಂದಣಿಗೆ:
21 ರಿಂದ 30 ದಿನಗಳವರೆಗೆ – ರೂ.20
30 ದಿನಗಳ ನಂತರ ಒಂದು ವರ್ಷದವರೆಗೆ – ರೂ.50 ಶುಲ್ಕ ವಿಧಿಸಲಾಗುತ್ತದೆ ಎಂದು ವಿವರಿಸಿದರು.
ಕೊಪ್ಪಳ ಜಿಲ್ಲೆಯಲ್ಲಿ ಗಂಗಾವತಿ (85), ಕನಕಗಿರಿ (67), ಕಾರಟಗಿ (36), ಕೊಪ್ಪಳ (180), ಕುಕನೂರು (65), ಕುಷ್ಟಗಿ (197) ಹಾಗೂ ಯಲಬುರ್ಗಾ (101) ಸೇರಿ ಒಟ್ಟು 731 ನೋಂದಣಿ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಇದರಲ್ಲಿ 713 ಗ್ರಾಮಾಂತರ ಹಾಗೂ 18 ನಗರ ಪ್ರದೇಶಗಳಲ್ಲಿ ಇವೆ ಎಂದು ತಿಳಿಸಿದರು.
2015ರಿಂದ ಇ-ಜನ್ಮ ತಂತ್ರಾಂಶದ ಮೂಲಕ ಜನನ–ಮರಣ ನೋಂದಣಿ ಆರಂಭವಾಗಿದ್ದು, 2018ರಿಂದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಸಂಪೂರ್ಣವಾಗಿ ಡಿಜಿಟಲ್ ನೋಂದಣಿ ಜಾರಿಯಲ್ಲಿದೆ. ಎಲ್ಲಾ ನೋಂದಣಾಧಿಕಾರಿಗಳು ಡಿಜಿಟಲ್ ಸಹಿಯೊಂದಿಗೆ ಪ್ರಮಾಣ ಪತ್ರ ವಿತರಿಸಬೇಕು. ಸೆಕ್ಷನ್–18ರನ್ವಯ ಎಲ್ಲಾ ನೋಂದಣಿ ಘಟಕಗಳಲ್ಲಿ ಶೇ.100ರಷ್ಟು ಘಟನೆಗಳ ದಾಖಲಾತಿ ಆಗಿರುವ ಬಗ್ಗೆ ನಿಯಮಿತ ಪರಿಶೀಲನೆ ನಡೆಸಬೇಕು ಎಂದು ಅವರು ಹೇಳಿದರು.

ಈ ಸುದ್ದಿಗೆ ನಿಮ್ಮ ಪ್ರತಿಕ್ರಿಯೆಯನ್ನು ವಿಶ್ರಾಂತಿ ಮಾಡಿ

Leave a Comment

Share This