ಬೈಲಹೊಂಗಲ / ಕೊಪ್ಪಳ:
ಗವಿಸಿದ್ಧೇಶ್ವರ ಜಾತ್ರೆ ಎಂದರೆ ಭಕ್ತಿ, ಸೇವೆ ಮತ್ತು ಸಂಭ್ರಮದ ಪ್ರತೀಕ. ಪ್ರತಿವರ್ಷವೂ ಒಂದಿಲ್ಲೊಂದು ಹೃದಯಸ್ಪರ್ಶಿ ನಿದರ್ಶನಗಳು ಈ ಜಾತ್ರೆಯಲ್ಲಿ ನಡೆಯುತ್ತಲೇ ಇರುತ್ತವೆ. ಈ ವರ್ಷವೂ ಭಕ್ತಿಯ ಅಪರೂಪದ ಘಟನೆಗಳು ಜಾತ್ರೆಗೆ ಮತ್ತಷ್ಟು ಮಹತ್ವ ತಂದಿವೆ.
ಬೈಲಹೊಂಗಲದ ವೃದ್ಧೆಯೊಬ್ಬರು ತಾವು ನಿತ್ಯ ಜೀವನೋಪಾಯಕ್ಕಾಗಿ ಮಾರಾಟ ಮಾಡುವ ಕೊತ್ತಂಬರಿ ಸೊಪ್ಪನ್ನು ಗವಿಸಿದ್ಧೇಶ್ವರ ಜಾತ್ರೆಯ ದಾಸೋಹಕ್ಕೆ ಅರ್ಪಿಸಿ ಭಕ್ತಿ ಮೆರೆದಿದ್ದಾರೆ. ನಿತ್ಯ ಸೊಪ್ಪು ಮಾರಾಟ ಮಾಡಿ ಬದುಕು ಸಾಗಿಸುವ ಈ ಅಜ್ಜಿ, ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿಗಳ ಪ್ರವಚನ ಹಾಗೂ ಹಿತನುಡಿಗಳನ್ನು ಮೊಬೈಲ್ ಮೂಲಕ ಕೇಳುತ್ತಿದ್ದು, ಅವರ ನುಡಿಗಳಿಂದ ಪ್ರೇರಿತರಾಗಿ ಸ್ವಂತ ಕಾಲ ಮೇಲೆ ನಿಂತು ಜೀವನ ಸಾಗಿಸುತ್ತಿದ್ದಾರೆ.
ಜಾತ್ರೆಯ ಸಂದರ್ಭದಲ್ಲಿ ಲಕ್ಷಾಂತರ ಭಕ್ತರಿಗೆ ದಾಸೋಹ ನಡೆಯುವ ಹಿನ್ನೆಲೆಯಲ್ಲಿ, “ನನ್ನಿಂದಲೂ ಒಂದು ಚಿಕ್ಕ ಸೇವೆಯಾಗಲಿ” ಎಂಬ ಭಾವನೆಯೊಂದಿಗೆ ಬೈಲಹೊಂಗಲದಿಂದ ಒಂದು ಬುಟ್ಟಿ ಕೊತ್ತಂಬರಿ ಸೊಪ್ಪು ತಂದು ಶ್ರೀಗಳಿಗೆ ಅರ್ಪಿಸಿದ್ದಾರೆ. ಈ ಹಿರಿಯ ಚೇತನದ ಸರಳ ಭಕ್ತಿಗೆ ಗವಿಶ್ರೀಗಳು ಕ್ಷಣಕಾಲ ಭಾವುಕರಾಗಿ, ಅಜ್ಜಿಯ ಸೇವೆಯನ್ನು ಮನಸಾರೆ ಮೆಚ್ಚಿಕೊಂಡು ಆಶೀರ್ವಾದ ನೀಡಿದ್ದಾರೆ.
ಇದೇ ವೇಳೆ, ಕೊಪ್ಪಳದ ಕೇಂದ್ರ ಕಾರಾಗೃಹದ ವಿಚಾರಣಾಧೀನ ಬಂಧಿಗಳೂ ಸಹ ಭಕ್ತಿಯ ವಿಶಿಷ್ಟ ನಿದರ್ಶನವನ್ನು ನೀಡಿದ್ದಾರೆ. ಗವಿಶ್ರೀಗಳು ಕಾರಾಗೃಹಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ನೀಡಿದ ಆಶೀರ್ವಚನ ಹಾಗೂ ಪ್ರೇರಣಾದಾಯಕ ಮಾತುಗಳಿಂದ ಪ್ರಭಾವಿತರಾದ ಬಂಧಿಗಳು, ತಮ್ಮ ಒಂದು ಒಪ್ಪೊತ್ತಿನ ಊಟವನ್ನು ತ್ಯಜಿಸಿ ದವಸ-ಧಾನ್ಯಗಳನ್ನು ಜಾತ್ರೆಯ ದಾಸೋಹಕ್ಕೆ ನೀಡಿದ್ದಾರೆ. ಜೊತೆಗೆ ತಮ್ಮ ಜೀವನದಲ್ಲಿ ಬದಲಾವಣೆ ತರಿಕೊಳ್ಳುವುದಾಗಿ ಶಪಥ ಮಾಡಿದ್ದಾರೆ.
ಭಕ್ತರ ಈ ಅಪಾರ ಪ್ರೀತಿ, ತ್ಯಾಗ ಮತ್ತು ಸೇವಾ ಮನೋಭಾವವನ್ನು ಕಂಡು ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಭಾವುಕರಾದರು.
“ಅಜ್ಜ ಎಲ್ಲವನ್ನೂ ಕೈ ಹಿಡಿದು ನಡೆಸುತ್ತಾನೆ. ಇಂತಹ ನಿಸ್ವಾರ್ಥ ಭಕ್ತರಿಂದಲೇ ಮಠದ ಹೆಸರು ಉಳಿಯುತ್ತದೆ” ಎಂದು ಹೇಳುತ್ತಾ ತಮ್ಮ ಭಾವನೆಗಳನ್ನು ನಿಯಂತ್ರಿಸಲಾಗದೆ ಕಣ್ಣೀರಾದರು.
ಈ ಸಂದರ್ಭ ಮಾತನಾಡಿದ ಗವಿಶ್ರೀಗಳು,
“ಜನರ ಪ್ರೀತಿ, ಸೇವಾ ಮನೋಭಾವ, ಕಕ್ಕುಲಾತಿ ಮತ್ತು ಭಕ್ತಿಗೆ ಎಷ್ಟು ಹೇಳಿದರೂ ಸಾಲದು. ಇವರಿಂದಲೇ ಜಾತ್ರೆ ಯಶಸ್ವಿಯಾಗುತ್ತದೆ. ಇತ್ತೀಚೆಗೆ ಸಮಾಜದಲ್ಲಿ ನಕಾರಾತ್ಮಕತೆ ಹೆಚ್ಚುತ್ತಿದೆ. ಹಾಗೆಂದು ಜವಾಬ್ದಾರಿ ಸ್ಥಾನದಲ್ಲಿರುವವರು ಸುಮ್ಮನಿರಬಾರದು. ಸಕಾರಾತ್ಮಕತೆಯನ್ನು ಬೆಳೆಸಬೇಕು” ಎಂದು ಕರೆ ನೀಡಿದರು.
ಗವಿಸಿದ್ಧೇಶ್ವರ ಜಾತ್ರೆ ಈ ಮೂಲಕ ಕೇವಲ ಧಾರ್ಮಿಕ ಆಚರಣೆಯಾಗದೇ, ಮಾನವೀಯತೆ, ಸೇವೆ ಮತ್ತು ಬದಲಾವಣೆಯ ಜೀವಂತ ಪಾಠವಾಗಿ ಮತ್ತೆ ಜನಮನ ಗೆದ್ದಿದೆ.







