ಬೆಳಗಾವಿ: ಈ ಯುವಕ ಬೆಳಗಾವಿ ಹೊರವಲಯದಲ್ಲಿ ಕುರಿ
ಕಾಯುತ್ತಿದ್ದ. ದೆಹಲಿಯಲ್ಲಿರುವ ಆತನ ಸ್ನೇಹಿತನಿಂದ ಮೊಬೈಲ್ ಫೋನ್‌ಗೆ ಕರೆ ಬಂತು. ‘ಮಗಾ, ನೀನು ಚಾನ್ಸ್ ಹೊಡೆದೆ ಕಣೋ’ ಎಂದಿತು ಧ್ವನಿ, ಖುಷಿಯಿಂದ ಜಿಗಿದಾಡಿದ ಯುವಕ ಮೊಬೈಲ್‌ನ್ನು ಗಾಳಿಯಲ್ಲಿ ತೂರಿದ. ತನ್ನ ಮುದ್ದಿನ ಕುರಿಮರಿಗಳನ್ನು ಎತ್ತಿಕೊಂಡು ಹೊಲದಲ್ಲಿ ಓಡಾಡಿದ…
ಯುಪಿಎಸ್‌ಸಿಯಲ್ಲಿ 551ನೇ ರಾಂಕ್ ಪಡೆದ ಬೀರದೇವ ಡೋಣೆ ದೇಶವೇ ತಿರುಗಿ ನೋಡುವಂಥ ಸಾಧನೆ ಮಾಡಿದ್ದಾರೆ. ಸಾಧನೆಗೆ ಬಡತನ, ಮತ– ಅಂತಸ್ತು ಅಡ್ಡಿಯಾಗುವುದಿಲ್ಲ ಎಂದು ತೋರಿಸಿದ್ದಾರೆ. ಕುರಿ ಕಾಯುವ ಕಾಯಕದ ಜತೆಗೇ ಸ್ಫೂರ್ತಿಯ ಕಾರಂಜಿಯಾಗಿದ್ದಾರೆ.
15 ದಿನಗಳ ಹಿಂದೆ ತಂದೆ-ತಾಯಿಗೆ ನೆರವಾಗಲು ಕುರಿ ಕಾಯುತ್ತ ಬೆಳಗಾವಿಗೆ ಬಂದಿದ್ದರು ಬೀರದೇವ. ಐಪಿಎಸ್ ಆಗುವ ಕನಸಿನ ಬುತ್ತಿ ಅವರು ಇದ್ದಲ್ಲಿಗೇ ಹುಡುಕಿಕೊಂಡು ಬಂದಿದೆ.
ಬೀರದೇವ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಯಮಗೆ ಗ್ರಾಮದವರು. ತಂದೆ ಸಿದ್ದಪ್ಪ, ತಾಯಿ ಬಾಲಾಬಾಯಿ ಕುರಿಗಾಹಿಗಳು. ಪಾಲಕರು ಜಿಲ್ಲೆಯ ಹದ್ದಿಯಲ್ಲೇ ಕುರಿ ಮೇಯಿಸುತ್ತಾರೆ. ಬೀರದೇವ ಸೋದರಮಾವಂದಿರು ಬೆಳಗಾವಿಯಲ್ಲಿ ಕುರಿಹಿಂಡು ಹೊಂದಿದ್ದಾರೆ. ಸಮಯ ಸಿಕ್ಕಾಗ ಈ ಸಾಧಕ ಇಲ್ಲಿಗೇ ಬಂದು ಕುರಿ ಕಾಯುವುದು ರೂಢಿ.
ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ತೇರ್ಗಡೆಯಾದ ಸಂಗತಿ ಕೇಳಿ ಕುಟುಂಬದವರ ಸಂತಸಕ್ಕೆ ಪಾರವೇ ಇಲ್ಲ. ಆ ಆನಂದವನ್ನೂ ಅವರು ಕುರಿಗಳ ಮಧ್ಯದಲ್ಲೇ ಸಂಭ್ರಮಿಸುತ್ತಿದ್ದಾರೆ.
ಎಸ್‌ಎಸ್‌ಎಲ್‌ಸಿ ಓದಿರುವ ಅವರ ತಂದೆ, ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಿದರು. ಅಣ್ಣ ವಾಸುದೇವ ಮಿಲಿಟರಿ ಸೇರಿದ ಬಳಿಕ ಬೀರದೇವ ಯುಪಿಎಸ್‌ಸಿಗೆ ಸಿದ್ಧತೆ ಶುರು ಮಾಡಿದರು. ಹಲವು ದಾನಿಗಳು, ಸಿಎಸ್‌ಆರ್ ಫಂಡ್ ನೀಡುವವರಿಂದಲೂ ಹಣದ ನೆರವು ಪಡೆದರು.
ನಾಲ್ಕನೇ ಪ್ರಯತ್ನದಲ್ಲಿ ಯಶಸ್ಸು ಗಳಿಸಿದ್ದಾರೆ. ಆದರೆ, 200 ಬ್ಯಾಂಕ್ ಒಳಗೇ ಬಂದು ಐಎಎಸ್ ಅಧಿಕಾರಿ ಆಗಬೇಕು ಎಂಬುದು ಅವರ ಛಲ. ಅದಕ್ಕಾಗಿ ಅಧ್ಯಯನ ಬಿಟ್ಟಿಲ್ಲ.
‘ದಿನವೂ ಎಂಟು ತಾಸು ಓದುವುದು ರೂಢಿ. ಪ್ರತಿ ತಾಸಿಗೂ ಐದು ನಿಮಿಷ ಬಿಡುವು ಪಡೆಯುತ್ತೇನೆ. ಮಿದುಳು ಸ್ವಲ್ಪ ನಿರಾಳ ಆಗಲು ಇದು ಮುಖ್ಯ. ರಾತ್ರಿ 11ಕ್ಕೆ ಮಲಗಿ, ಬೆಳಿಗ್ಗೆ 7.30ಕ್ಕೆ ಏಳುತ್ತೇನೆ. ದೈನಂದಿನ ಕೆಲಸಗಳ ಜತೆಗೇ 8 ತಾಸು ಗಟ್ಟಿಯಾಗಿ ಓದಲು ಸಾಧ್ಯವಿದೆ. ಮೊಬೈಲ್ ಬಿಟ್ಟೆ, ಸಾಮಾಜಿಕ ಜಾಲತಾಣಗಳಿಂದ ದೂರವುಳಿದೆ. ಅವು ನಮ್ಮನ್ನು ವ್ಯಾಕುಲತೆಗೆ ತಳ್ಳುತ್ತವೆ. ಪ್ರತಿ ದಿನ ಒಂದು ತಾಸು ಗ್ರಂಥಾಲಯದಲ್ಲಿ ಪತ್ರಿಕೆಗಳನ್ನು ಕಡ್ಡಾಯ ಓದುತ್ತೇನೆ’ ಎಂದು ಬೀರದೇವ ತಮ್ಮ ದಿನಚರಿ ವಿವರಿಸಿದರು.
‘ಕನ್ನಡವೋ, ಮರಾಠಿಯೋ, ಇಂಗ್ಲಿಷ್ಟೋ… ಯಾವುದು ಸುಲಭವೋ ಅದೇ ಮಾಧ್ಯಮ ಆಯ್ಕೆ ಮಾಡಿಕೊಳ್ಳಬೇಕು. ಎಲ್ಲದಕ್ಕೂ ಮುಖ್ಯವಾಗಿ ಬೇಕಿರುವುದು ತನ್ಮಯತೆ. ಅದೇ ಯಶಸ್ಸಿನ ಮೊದಲ ಮೆಟ್ಟಿಲು’ ಎಂದರು ಅವರು.
‘ಚಂಚಲತೆಯಿಂದ ಹೊರಬೇಕು’ ‘ನನ್ನನ್ನು ನಾನೇ ಶೋಧಿಸಿಕೊಂಡು ಮೂರು ಬಾರಿ ಏಕೆ ವಿಫಲನಾದೆ ಎಂದು ಖಾತ್ರಿ ಮಾಡಿಕೊಂಡೆ. ಚಂಚಲತೆ ಮೆಟ್ಟಿ ನಿಂತೆ. ಯಶಸ್ಸು ಸಿಕ್ಕಿತು. ಪರಿಶ್ರಮಕ್ಕೆ ಫಲ ಸಿಕ್ಕಿತು’ ಎಂದು ಬೀರದೇವ ಡೋಣೆ ತಿಳಿಸಿದರು. ‘ಪ್ರಾಥಮಿಕ ಪ್ರೌಢಶಾಲೆ ಪಿಯು ಶಿಕ್ಷಣ ಮರಾಠಿಯಲ್ಲಿ ಸರ್ಕಾರಿ ಶಾಲೆಗಳಲ್ಲೇ ಮುಗಿಸಿದೆ. ಪುಣೆಯಲ್ಲಿ ಸಿವಿಲ್ ಎಂಜಿನಿಯರಿಂಗ್ ಪದವಿ ಪಡೆದೆ. ಯುಪಿಎಸ್‌ಸಿ ಟಾಪರ್‌ಗಳನ್ನು ನೋಡಿ ನನ್ನಲ್ಲಿ ಕನಸು ಮೊಳೆಯಿತು. ದೆಹಲಿಗೆ ಹೋಗಿ ಕೋಚಿಂಗ್ ಪಡೆದು ಬಂದೆ’ ಎಂದರು. ‘ಹಿರಿಯರಾದ ಸವಿತಾ ಕುಲಕರ್ಣಿ ಸ್ನೇಹಿತರಾದ ನಿಶಾಂತ ಮತ್ತು ಕೋಮಲ್ ಅಧ್ಯಯನ ಸಾಮಗ್ರಿ ನೀಡಿ ನೆರವಾದರು. ಮತ್ತೊಮ್ಮೆ ಪುಣೆಯಲ್ಲಿ ಕೋಚಿಂಗ್ ಪಡೆದೆ. ಹಣ ಹೋದರೂ ಚಿಂತೆಯಿಲ್ಲ ‘ಅವಕಾಶಗಳು’ ಕಳೆದುಹೋಗಬಾರದು ಎಂಬುದು ನನ್ನ ಅನಿಸಿಕೆ. ಎಷ್ಟೇ ಆತ್ಮಸ್ಥೆರ್ಯವಿದ್ದರೂ ಒಮ್ಮೆ ಕೋಚಿಂಗ್ ಪಡೆಯುವುದು ಅವಶ್ಯಕ’ ಎಂದು ಅವರು ಹೇಳಿದರು.







