Home » ಬೀದರ ಜಿಲ್ಲೆ » ಔರಾದ್‌ನಲ್ಲಿ ಭೀಕರ ಅಗ್ನಿ ದುರಂತ,ಗಣೇಶ್ ಮಾರ್ಕೆಟ್‌ನಲ್ಲಿ 10 ಅಂಗಡಿಗಳು ಭಸ್ಮ | ಲಕ್ಷಾಂತರ ರೂ. ನಷ್ಟ

ಔರಾದ್‌ನಲ್ಲಿ ಭೀಕರ ಅಗ್ನಿ ದುರಂತ,ಗಣೇಶ್ ಮಾರ್ಕೆಟ್‌ನಲ್ಲಿ 10 ಅಂಗಡಿಗಳು ಭಸ್ಮ | ಲಕ್ಷಾಂತರ ರೂ. ನಷ್ಟ

ಔರಾದ್ (ಬೀದರ್ ಜಿಲ್ಲೆ): ಬೀದರ್ ಜಿಲ್ಲೆಯ ಔರಾದ್ ಪಟ್ಟಣದಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಔರಾದ್ ಬಸ್ ನಿಲ್ದಾಣದ ಎದುರಿನ ಗಣೇಶ್ ಮಾರ್ಕೆಟ್‌ನಲ್ಲಿ ಇರುವ ಸುಮಾರು 10 ಅಂಗಡಿಗಳು ಬೆಂಕಿಗೆ ಆಹುತಿಯಾಗಿವೆ. ಈ ಘಟನೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಆಸ್ತಿ–ಪಾಸ್ತಿ ನಷ್ಟ ಸಂಭವಿಸಿದೆ.

ತಡರಾತ್ರಿ ಸುಮಾರು 2 ಗಂಟೆ ಸುಮಾರಿಗೆ ಕಾಣಿಸಿಕೊಂಡ ಬೆಂಕಿ, ನೋಡನೋಡುತ್ತಿದ್ದಂತೆಯೇ ಇಡೀ ಮಾರುಕಟ್ಟೆಗೆ ವ್ಯಾಪಿಸಿದೆ. ಬೆಂಕಿಯ ತೀವ್ರತೆಗೆ 1 ಚಪ್ಪಲಿ ಅಂಗಡಿ, 1 ಕಿರಾಣಿ ಅಂಗಡಿ, 1 ತರಕಾರಿ ಅಂಗಡಿ ಹಾಗೂ 7 ಭಾಂಡೆ ಅಂಗಡಿಗಳು ಸೇರಿದಂತೆ ಒಟ್ಟು 10 ಅಂಗಡಿಗಳು ಸಂಪೂರ್ಣವಾಗಿ ಭಸ್ಮವಾಗಿವೆ.

ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಲೇ ಈ ಅಗ್ನಿ ಅವಘಡ ಸಂಭವಿಸಿದೆ ಎಂದು ಶಂಕಿಸಲಾಗಿದೆ. ಅಗ್ನಿಶಾಮಕ ದಳದ ವಾಹನ ತಡವಾಗಿ ಸ್ಥಳಕ್ಕೆ ತಲುಪಿದ ಕಾರಣ ಬೆಂಕಿ ನಂದಿಸಲು ಸಾಧ್ಯವಾಗಲಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ನೆರೆಯ ಬೀದರ್ ಹಾಗೂ ಭಾಲ್ಕಿಯಿಂದ ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಆಗಮಿಸುವಷ್ಟರಲ್ಲಿ ಅಂಗಡಿಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದವು. ಅಗ್ನಿಶಾಮಕ ದಳದ ವಿಫಲತೆಯೇ ಹೆಚ್ಚಿನ ನಷ್ಟಕ್ಕೆ ಕಾರಣ ಎಂದು ಅಂಗಡಿ ಮಾಲೀಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಬ್ಬದ ಸೀಸನ್ ಹಿನ್ನೆಲೆ ಲಕ್ಷಾಂತರ ರೂಪಾಯಿ ಸಾಲ ಮಾಡಿ ವಸ್ತುಗಳನ್ನು ತರಿಸಲಾಗಿತ್ತು. ಆದರೆ ಅನಿರೀಕ್ಷಿತ ಬೆಂಕಿ ಅವಘಡದಿಂದ ನಮ್ಮ ಬದುಕೇ ಬೀದಿಗೆ ಬಂದಿದೆ ಎಂದು ಪೀಡಿತ ಅಂಗಡಿ ಮಾಲೀಕರು ಕಣ್ಣೀರು ಹಾಕಿದ್ದಾರೆ.

ಘಟನೆಯ ಕುರಿತು ಸರ್ಕಾರ ತಕ್ಷಣವೇ ಸೂಕ್ತ ಪರಿಹಾರ ನೀಡಬೇಕು ಎಂದು ಪೀಡಿತರು ಆಗ್ರಹಿಸಿದ್ದಾರೆ. ಘಟನಾ ಸ್ಥಳಕ್ಕೆ ತಹಶೀಲ್ದಾರ್ ಮಹೇಶ ಪಾಟೀಲ ಹಾಗೂ ಸಿಪಿಐ ರಘುವೀರಸಿಂಗ್ ಠಾಕೂರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಸುದ್ದಿಗೆ ನಿಮ್ಮ ಪ್ರತಿಕ್ರಿಯೆಯನ್ನು ವಿಶ್ರಾಂತಿ ಮಾಡಿ

Leave a Comment

Share This