ಬೆಂಗಳೂರು:
ರಾಜ್ಯದ ಲಕ್ಷಾಂತರ ಮಹಿಳಾ ಫಲಾನುಭವಿಗಳಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದ್ದು, ಗೃಹಲಕ್ಷ್ಮಿ ಯೋಜನೆಯಡಿ ಎರಡು ಕಂತಿನ ಹಣವನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೃಹಲಕ್ಷ್ಮಿ ಯೋಜನೆಯಡಿ ಇದುವರೆಗೆ 24 ಕಂತಿನ ಹಣವನ್ನು ಈಗಾಗಲೇ ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು. ಇದೀಗ ಮತ್ತಷ್ಟು ಎರಡು ಕಂತಿನ ಹಣ ಬಿಡುಗಡೆ ಮಾಡುವ ಮೂಲಕ ಒಟ್ಟು 26 ಕಂತುಗಳಲ್ಲಿ 52 ಸಾವಿರ ರೂಪಾಯಿ ಹಣವನ್ನು ಫಲಾನುಭವಿಗಳಿಗೆ ನೀಡಿದಂತಾಗುತ್ತದೆ ಎಂದು ತಿಳಿಸಿದರು.
ಈ ಯೋಜನೆಯು ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಮಹತ್ವದ ಹೆಜ್ಜೆಯಾಗಿದ್ದು, ರಾಜ್ಯ ಸರ್ಕಾರದ ಪ್ರಮುಖ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿದೆ ಎಂದು ಸಚಿವೆ ಹೇಳಿದರು.
ಗೃಹಲಕ್ಷ್ಮಿ ಹಣ ಜಮೆಯಾಗಿಲ್ವಾ? 181 ಸಹಾಯವಾಣಿಗೆ ಕರೆ ಮಾಡಿ
ಗೃಹಲಕ್ಷ್ಮಿ ಯೋಜನೆಯ ಹಣ ಖಾತೆಗೆ ಜಮೆಯಾಗದೇ ಹಲವು ತಿಂಗಳುಗಳಾದರೂ ಕಾಯುತ್ತಿರುವ ಫಲಾನುಭವಿಗಳಿಗೆ ಸರ್ಕಾರ ಮತ್ತೊಂದು ಮಹತ್ವದ ವ್ಯವಸ್ಥೆಯನ್ನು ಕಲ್ಪಿಸಿದೆ. ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ‘181’ ಸಹಾಯವಾಣಿಯನ್ನು ತೆರೆಯಲಾಗಿದ್ದು, ಇದರಡಿ ಇದೇ ಮೊದಲ ಬಾರಿಗೆ ಗೃಹಲಕ್ಷ್ಮಿ ಯೋಜನೆಯ ಸಮಸ್ಯೆಗಳಿಗೂ ಸ್ಪಂದಿಸಲಾಗುತ್ತಿದೆ.
ಬಹುಮಾನ್ಯ ಸಂದರ್ಭಗಳಲ್ಲಿ ಎರಡು ತಿಂಗಳು, ಮೂರು ತಿಂಗಳಾದರೂ ಹಣ ಜಮೆಯಾಗದೇ ಇರುವ ಸಮಸ್ಯೆ ಎದುರಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಫಲಾನುಭವಿಗಳು ಕಚೇರಿಗಳಿಗೆ ಅಲೆದಾಡುವುದು, ನೆರೆಹೊರೆಯವರ ಬಳಿ ವಿಚಾರಿಸುವುದು ಸಾಮಾನ್ಯ. ಇನ್ನು ಮುಂದೆ ಇಂತಹ ತೊಂದರೆಗಳಿಗಾಗಿ ಎಲ್ಲಿಯೂ ಹೋಗುವ ಅವಶ್ಯಕತೆ ಇಲ್ಲ.
ಹಣ ನಿಲ್ಲಲು ಕಾರಣವೇನು?
ತಾಂತ್ರಿಕ ದೋಷಗಳು,
ಇ-ಕೆವೈಸಿ (e-KYC) ಪೂರ್ಣಗೊಳಿಸದಿರುವುದು,
ಆದಾಯ ತೆರಿಗೆ ಪಾವತಿದಾರರಾಗಿರುವುದು,
ಅಥವಾ ದಾಖಲೆಗಳಲ್ಲಿ ವ್ಯತ್ಯಾಸಗಳಿರುವುದು
ಇಂತಹ ಕಾರಣಗಳಿಂದ ಗೃಹಲಕ್ಷ್ಮಿ ಹಣ ತಾತ್ಕಾಲಿಕವಾಗಿ ನಿಲ್ಲಿಸಲಾಗಿರಬಹುದು ಎಂದು ಇಲಾಖೆ ತಿಳಿಸಿದೆ.
181 ಸಹಾಯವಾಣಿ ಹೇಗೆ ಕೆಲಸ ಮಾಡುತ್ತದೆ?
ಫಲಾನುಭವಿ 181ಕ್ಕೆ ಕರೆ ಮಾಡಿದರೆ, ಅಲ್ಲಿನ ಆಪರೇಟರ್‌ಗಳು ಅಗತ್ಯ ಮಾಹಿತಿಯನ್ನು ಪಡೆಯುತ್ತಾರೆ
ಫಲಾನುಭವಿ ಸೇರಿರುವ ತಾಲೂಕಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ದೂರು ರವಾನಿಸಲಾಗುತ್ತದೆ
ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದು, ಫಲಾನುಭವಿಗೆ ನಿಖರವಾದ ಉತ್ತರ ನೀಡಲಾಗುತ್ತದೆ
ಈ ಮೂಲಕ ಗೃಹಲಕ್ಷ್ಮಿ ಹಣದ ಸ್ಥಿತಿಗತಿ ಬಗ್ಗೆ ಸ್ಪಷ್ಟ ಮಾಹಿತಿ ಮನೆಯಲ್ಲೇ ಕುಳಿತು ಪಡೆಯಬಹುದಾಗಿದೆ.ರಾಜ್ಯ ಸರ್ಕಾರದ ಈ ಕ್ರಮದಿಂದ ಗೃಹಲಕ್ಷ್ಮಿ ಯೋಜನೆಯಡಿ ಹಣ ಜಮೆಯಾಗದೇ ಆತಂಕದಲ್ಲಿದ್ದ ಮಹಿಳೆಯರಿಗೆ ದೊಡ್ಡ ಮಟ್ಟದ ನೆಮ್ಮದಿ ದೊರಕಲಿದೆ.







