Home » ಶಿಕ್ಷಣ » ಎಂಜಿನಿಯರಿಂಗ್ ಸೇರಿ ವೃತ್ತಿಪರ ಕೋರ್ಸ್‌ಗಳ ಸಿಇಟಿ ದಿನಾಂಕ ಪ್ರಕಟ

ಎಂಜಿನಿಯರಿಂಗ್ ಸೇರಿ ವೃತ್ತಿಪರ ಕೋರ್ಸ್‌ಗಳ ಸಿಇಟಿ ದಿನಾಂಕ ಪ್ರಕಟ

ಬೆಂಗಳೂರು: ಎಂಜಿನಿಯರಿಂಗ್ ಪದವಿ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸಲಾಗುವ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (CET) ದಿನಾಂಕವನ್ನು ರಾಜ್ಯ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಅಧಿಕೃತವಾಗಿ ಪ್ರಕಟಿಸಿದ್ದಾರೆ.
ಸಚಿವರು ಪ್ರಕಟಿಸಿದಂತೆ, 2026ನೇ ಸಾಲಿನ ಸಿಇಟಿ ಪರೀಕ್ಷೆಗಳು ಏಪ್ರಿಲ್ 23 ಮತ್ತು 24ರಂದು ರಾಜ್ಯದಾದ್ಯಂತ ನಡೆಯಲಿವೆ. ಪರೀಕ್ಷೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಜನವರಿ 17ರಿಂದ ಆನ್‌ಲೈನ್ ಮೂಲಕ ಆರಂಭವಾಗಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಈ ಬಾರಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲ ಕಲ್ಪಿಸುವ ಉದ್ದೇಶದಿಂದ ಕಾಲೇಜು ಹಂತದಲ್ಲೇ ಅರ್ಜಿ ಭರ್ತಿ ಮಾಡುವ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಇದಕ್ಕಾಗಿ ಆಯ್ದ ಪಿಯು ವಿಜ್ಞಾನ ಕಾಲೇಜುಗಳ ಪ್ರಾಧ್ಯಾಪಕರಿಗೆ ವಿಶೇಷ ತರಬೇತಿ ನೀಡಲಾಗುವುದು. ತರಬೇತಿ ಪಡೆದ ಪ್ರಾಧ್ಯಾಪಕರು ತಮ್ಮ ಕಾಲೇಜಿನ ಇತರೆ ಸಿಬ್ಬಂದಿಗೆ ಮಾರ್ಗದರ್ಶನ ನೀಡಿ, ವಿದ್ಯಾರ್ಥಿಗಳ ಅರ್ಜಿ ಭರ್ತಿಯ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡಲಿದ್ದಾರೆ.
ಇದೇ ವೇಳೆ, ಈ ವರ್ಷ ಮೊದಲ ಬಾರಿಗೆ ಆಧಾರ್ ಪ್ರಮಾಣೀಕರಣ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಹೆಸರು, ಹುಟ್ಟಿದ ದಿನಾಂಕ ಹಾಗೂ ವಿಳಾಸದ ವಿವರಗಳನ್ನು ಆಧಾರ್ ಕಾರ್ಡ್ ಅಥವಾ ಡಿಜಿಲಾಕರ್ ಮೂಲಕ ದೃಢೀಕರಿಸುವ ವ್ಯವಸ್ಥೆ ಕಲ್ಪಿಸಲಾಗಿದೆ. ಇದರಿಂದ ಅರ್ಜಿಯಲ್ಲಿ ಹೆಸರು ಅಥವಾ ವೈಯಕ್ತಿಕ ಮಾಹಿತಿಯಲ್ಲಿ ಉಂಟಾಗುತ್ತಿದ್ದ ದೋಷಗಳನ್ನು ತಪ್ಪಿಸಲು ಸಾಧ್ಯವಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ.
ಪರೀಕ್ಷೆಯ ವೇಳಾಪಟ್ಟಿ ಹೀಗಿದೆ:
ಏಪ್ರಿಲ್ 23, ಬೆಳಿಗ್ಗೆ 10.30 ರಿಂದ 11.50ರವರೆಗೆ – ಭೌತಶಾಸ್ತ್ರ
ಮಧ್ಯಾಹ್ನ 2.30 ರಿಂದ 3.50ರವರೆಗೆ – ರಸಾಯನ ಶಾಸ್ತ್ರ
ಏಪ್ರಿಲ್ 24, ಬೆಳಿಗ್ಗೆ 10.30 ರಿಂದ 11.50ರವರೆಗೆ – ಗಣಿತ
ಮಧ್ಯಾಹ್ನ 2.30 ರಿಂದ 3.50ರವರೆಗೆ – ಜೀವಶಾಸ್ತ್ರ
ಇದಲ್ಲದೆ, ಗಡಿನಾಡು ಹಾಗೂ ಹೊರನಾಡು ಅಭ್ಯರ್ಥಿಗಳಿಗಾಗಿ ಕನ್ನಡ ಭಾಷಾ ಪರೀಕ್ಷೆಯನ್ನು ಏಪ್ರಿಲ್ 22ರಂದು ನಡೆಸಲಾಗುವುದು ಎಂದು ಪ್ರಕಟಿಸಲಾಗಿದೆ.
ಸಿಇಟಿ ಪರೀಕ್ಷೆ ಮೂಲಕ ಎಂಜಿನಿಯರಿಂಗ್, ವೈದ್ಯಕೀಯ, ಕೃಷಿ, ಪಶುವೈದ್ಯಕೀಯ ಹಾಗೂ ಇತರೆ ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಲಕ್ಷಾಂತರ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವ ನಿರೀಕ್ಷೆ ಇದೆ. ಹೊಸ ವ್ಯವಸ್ಥೆಗಳು ವಿದ್ಯಾರ್ಥಿಗಳಿಗೆ ಹೆಚ್ಚು ಪಾರದರ್ಶಕ ಹಾಗೂ ಸುಲಭ ಪ್ರವೇಶ ಪ್ರಕ್ರಿಯೆಯನ್ನು ಒದಗಿಸಲಿದೆ ಎಂಬ ವಿಶ್ವಾಸವನ್ನು ಸರ್ಕಾರ ವ್ಯಕ್ತಪಡಿಸಿದೆ.

ಈ ಸುದ್ದಿಗೆ ನಿಮ್ಮ ಪ್ರತಿಕ್ರಿಯೆಯನ್ನು ವಿಶ್ರಾಂತಿ ಮಾಡಿ

Leave a Comment

Share This