ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಮತ್ತಷ್ಟು ಬಲಪಡಿಸಿ ಜನರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುವ ಉದ್ದೇಶದಿಂದ ಸರ್ಕಾರ ಪೊಲೀಸ್ ಸಿಬ್ಬಂದಿ ಬಲವನ್ನು ಹೆಚ್ಚಿಸಲು ನಿರ್ಧರಿಸಿದೆ. ಈ ವರ್ಷವೇ 8,300 ಪೊಲೀಸ್ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಹಾಗೂ ಐಜಿಪಿ ಡಾ. ಎಂ.ಎ. ಸಲೀಂ ತಿಳಿಸಿದ್ದಾರೆ.
ಕರ್ನಾಟಕ ಪೊಲೀಸ್ ಪಡೆ ದೇಶಕ್ಕೆ ಮಾದರಿಯಾಗಿದ್ದು, ಕಾಲಮಾನಕ್ಕೆ ತಕ್ಕಂತೆ ನೂತನ ಪೊಲೀಸಿಂಗ್ ವ್ಯವಸ್ಥೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದರು. ಗುಪ್ತಚರ ವಿಭಾಗ ಸೇರಿದಂತೆ ಖಾಲಿಯಿರುವ ಪೊಲೀಸ್ ಪೇದೆಗಳು ಹಾಗೂ ಇನ್ಸ್ಪೆಕ್ಟರ್ ಹುದ್ದೆಗಳ ನೇರ ನೇಮಕಾತಿಗೆ ಸರ್ಕಾರ ಅನುಮೋದನೆ ನೀಡಿದ್ದು, ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಭರ್ತಿ ಪ್ರಕ್ರಿಯೆ ನಡೆಯಲಿದೆ ಎಂದು ಮಾಹಿತಿ ನೀಡಿದರು.
ರಾಜ್ಯದ ಆಂತರಿಕ ಭದ್ರತೆಯ ಪ್ರಮುಖ ಅಂಗವಾಗಿರುವ ಗುಪ್ತಚರ ವಿಭಾಗವನ್ನು ಇನ್ನಷ್ಟು ಬಲಪಡಿಸಲು ಸರ್ಕಾರ ಒಪ್ಪಿಗೆ ನೀಡಿದ್ದು, ಈಗಾಗಲೇ 100 ಹುದ್ದೆಗಳ ನೇಮಕಾತಿ ನಡೆದಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸಿಬ್ಬಂದಿ ಸೇರ್ಪಡೆಯಾಗಲಿದ್ದಾರೆ ಎಂದು ಡಾ. ಸಲೀಂ ತಿಳಿಸಿದರು. ಜೊತೆಗೆ ಹೊಸ ಪೀಳಿಗೆಯ ಪೊಲೀಸರಿಗೆ ನವೀನ ತಂತ್ರಜ್ಞಾನ ಬಳಕೆ ಸೇರಿದಂತೆ ವಿವಿಧ ವಿಷಯಗಳಲ್ಲಿ ತಜ್ಞರಿಂದ ವಿಶೇಷ ತರಬೇತಿ ನೀಡಲಾಗುತ್ತಿದೆ ಎಂದರು.
ಸಾರ್ವಜನಿಕ ಸುರಕ್ಷತೆ ಹೆಚ್ಚಿಸುವ ನಿಟ್ಟಿನಲ್ಲಿ ಹಲವು ಹೊಸ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. ಪ್ರಮುಖ ಜಾತ್ರೆ ಹಾಗೂ ದೊಡ್ಡ ಕಾರ್ಯಕ್ರಮಗಳಲ್ಲಿ ಜನಸಂದಣಿ ನಿಯಂತ್ರಣಕ್ಕೆ ಎಐ ತಂತ್ರಜ್ಞಾನ ಬಳಕೆ, ಚಿಕ್ಕಬಳ್ಳಾಪುರದ ನಂದಿ ಬಳಿ ಕೇಂದ್ರ ಸರ್ಕಾರದ ಸಹಯೋಗದಲ್ಲಿ ಪೊಲೀಸ್ ತರಬೇತಿ ಕೇಂದ್ರ ಸ್ಥಾಪನೆ, ಡ್ರಗ್ಸ್ ಹಾವಳಿ ತಡೆಗೆ ಮಾದಕವಸ್ತು ವಿರೋಧಿ ಕಾರ್ಯಪಡೆ ಮೇಲ್ದರ್ಜೆಗೇರಿಕೆ ಮುಂತಾದ ಕ್ರಮಗಳ ಬಗ್ಗೆ ಅವರು ವಿವರಿಸಿದರು.
ಇದಲ್ಲದೆ, ಒಂಟಿ ವೃದ್ಧರ ಸುರಕ್ಷತೆಗೆ ವಾರಕ್ಕೊಮ್ಮೆ ಮನೆಗೆ ಭೇಟಿ ನೀಡುವ ‘ಆಸರೆ’ ಯೋಜನೆ, ಸಂತ್ರಸ್ತ ಕೇಂದ್ರಿತ ನೆರವು ಯೋಜನೆಯಡಿ ಪ್ರತೀ ತಿಂಗಳ ಮೂರನೇ ಭಾನುವಾರ ಸಂತ್ರಸ್ತರ ಮನೆಗೆ ತೆರಳಿ ಸಾಂತ್ವನ ಕಾರ್ಯಕ್ರಮ ನಡೆಸುವ ಉದ್ದೇಶವಿದೆ ಎಂದು ಹೇಳಿದರು.
ರಾಜ್ಯದಲ್ಲಿ ಜನಸ್ನೇಹಿ ಹಾಗೂ ತಂತ್ರಜ್ಞಾನಾಧಾರಿತ ಪೊಲೀಸಿಂಗ್ ವ್ಯವಸ್ಥೆ ರೂಪಿಸುವುದು ಸರ್ಕಾರದ ಗುರಿಯಾಗಿದೆ ಎಂದು ಡಾ. ಎಂ.ಎ. ಸಲೀಂ ಸ್ಪಷ್ಟಪಡಿಸಿದ್ದಾರೆ.







