ಬೆಂಗಳೂರು:
ಕರ್ನಾಟಕ ರಾಜ್ಯದಲ್ಲಿ ಇ-ಖಾತೆ (E-Khata) ವಿಷಯವು ಭಾರೀ ಚರ್ಚೆಗೆ ಗ್ರಾಸವಾಗಿದೆ. ರಾಜ್ಯದ ವಿವಿಧ ಸ್ಥಳೀಯ ಸಂಸ್ಥೆಗಳಾದ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳ ವ್ಯಾಪ್ತಿಗೆ ಒಳಪಡುವ ಪ್ರತಿಯೊಂದು ಆಸ್ತಿಗೂ ಇ-ಖಾತಾ ಅಥವಾ ಬಿ-ಖಾತಾ ಸೃಜಿಸುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಸ್ಥಳೀಯ ಸಂಸ್ಥೆಗಳು ವ್ಯಾಪಕ ಜಾಗೃತಿ ಹಾಗೂ ದಾಖಲೆ ಸಂಗ್ರಹ ಕಾರ್ಯವನ್ನು ಕೈಗೊಂಡಿವೆ.
ನಗರಸಭೆ ವ್ಯಾಪ್ತಿಯಲ್ಲಿನ ಎಲ್ಲಾ ಆಸ್ತಿ ಮಾಲೀಕರು ತಮ್ಮ ಮಾಲೀಕತ್ವದ ದಾಖಲೆಗಳನ್ನು ನಗರಸಭೆಗೆ ಸಲ್ಲಿಸಿ ಇ-ಖಾತೆ ಪಡೆಯಬೇಕು ಎಂದು ನಗರಸಭೆಗಳು ಸೂಚನೆ ನೀಡಿವೆ. ಈ ಬಗ್ಗೆ ಸಾರ್ವಜನಿಕರಿಗೆ ತಿಳಿಸಲು ಪತ್ರಿಕಾ ಪ್ರಕಟಣೆ, ಆಟೋಗಳ ಮೂಲಕ ಪ್ರಚಾರ, ನಗರದ ಪ್ರಮುಖ ಸ್ಥಳಗಳಲ್ಲಿ ಬ್ಯಾನರ್ ಅಳವಡಿಕೆ, ಹಾಗೂ ಸ್ಥಳೀಯ ಸುದ್ದಿ ವಾಹಿನಿಗಳಲ್ಲಿ ವರದಿ ಮೂಲಕ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿವೆ.
ಮನೆಮನೆಗೆ ಭೇಟಿ ನೀಡಿ ಇ-ಖಾತೆ ಜಾಗೃತಿ
ನಗರಸಭೆ ಸಿಬ್ಬಂದಿಗಳು ಪ್ರತಿ ವಾರ್ಡ್ ಹಾಗೂ ಪ್ರತಿ ಮನೆಗೆ ಖುದ್ದಾಗಿ ಭೇಟಿ ನೀಡಿ, ಇ-ಖಾತೆ ಮಾಡಿಸಿಕೊಳ್ಳದೆ ಇರುವ ಆಸ್ತಿ ಮಾಲೀಕರಿಗೆ ಅಗತ್ಯ ದಾಖಲೆಗಳ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ದಾಖಲೆಗಳನ್ನು ಸಲ್ಲಿಸಿದ ಮಾಲೀಕರಿಗೆ ನಗರಸಭೆಯಲ್ಲೇ ಇ-ಖಾತಾ ಅಥವಾ ಬಿ-ಖಾತಾ ಸೃಜಿಸಿ ನೀಡುವ ಕಾರ್ಯವನ್ನು ಕೈಗೊಂಡಿದ್ದಾರೆ.
ಅಗತ್ಯ ದಾಖಲೆ ಸಲ್ಲಿಕೆ ಕಡ್ಡಾಯ
ನಗರ ವ್ಯಾಪ್ತಿಯ ಆಸ್ತಿ ಮಾಲೀಕರುಗಳು ಆಸ್ತಿ ತೆರಿಗೆ ಪಾವತಿ ವಿವರಗಳೊಂದಿಗೆ ಅಗತ್ಯ ದಾಖಲೆಗಳನ್ನು ನಗರಸಭೆಗೆ ಸಲ್ಲಿಸದೇ ಇದ್ದಲ್ಲಿ, ಇ-ಖಾತೆ ಯೋಜನೆಯಲ್ಲಿ ಶೇ.100 ರಷ್ಟು ಪ್ರಗತಿ ಸಾಧಿಸಲು ಸಾಧ್ಯವಿಲ್ಲ ಎಂದು ನಗರಸಭೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಆನ್ಲೈನ್ ಮೂಲಕವೂ ಇ-ಖಾತೆ ಪಡೆಯುವ ವ್ಯವಸ್ಥೆ
ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಇ-ಖಾತೆ ಪಡೆಯದೇ ಇರುವ ಆಸ್ತಿ ಮಾಲೀಕರಿಗಾಗಿ ಸರ್ಕಾರ ಹೊಸ ತಂತ್ರಾಂಶವನ್ನು ಚಾಲನೆಗೆ ತಂದಿದೆ. ಅದರಂತೆ ಆಸ್ತಿ ಮಾಲೀಕರು
https://eaasthi.karnataka.gov.in ವೆಬ್ಸೈಟ್ಗೆ ಭೇಟಿ ನೀಡಿ,
Citizen Login ವಿಭಾಗದಲ್ಲಿ ತಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ,
ಇ-ಖಾತೆ ಅಥವಾ ಬಿ-ಖಾತೆಗೆ ಅಗತ್ಯವಿರುವ ದಾಖಲೆಗಳನ್ನು ಆನ್ಲೈನ್ ಮೂಲಕ ಅಪ್ಲೋಡ್ ಮಾಡಬಹುದಾಗಿದೆ.
ಅಪ್ಲೋಡ್ ಮಾಡಿದ ದಾಖಲೆಗಳನ್ನು ನಗರಸಭೆ ನಿಯಮಾನುಸಾರ ಪರಿಶೀಲಿಸಿ, ಅರ್ಹತೆ ಇದ್ದಲ್ಲಿ ಇ-ಖಾತಾ ಅಥವಾ ಬಿ-ಖಾತಾ ಸೃಜಿಸಿ ನೀಡಲಾಗುತ್ತದೆ.
ನಗರಸಭೆ ಮೂಲಕವೂ ಅರ್ಜಿ ಸಲ್ಲಿಕೆ
ಆನ್ಲೈನ್ ಮೂಲಕ ಸಲ್ಲಿಸಲು ಸಾಧ್ಯವಿಲ್ಲದವರು, ಅಗತ್ಯ ದಾಖಲೆಗಳನ್ನು ನೇರವಾಗಿ ನಗರಸಭೆಗೆ ಸಲ್ಲಿಸಬಹುದು. ಈ ಸಂದರ್ಭದಲ್ಲಿ ನಗರಸಭೆ ಸಿಬ್ಬಂದಿಗಳು ದಾಖಲೆಗಳನ್ನು ತಂತ್ರಾಂಶದಲ್ಲಿ ಅಪ್ಲೋಡ್ ಮಾಡಿ, ಅರ್ಜಿದಾರರಿಂದ ಒಟಿಪಿ ಪಡೆದು ಮುಂದಿನ ಕ್ರಮ ಕೈಗೊಂಡು ಇ-ಖಾತೆ ಸೃಜಿಸಿ ನೀಡುತ್ತಾರೆ.
ಪಾರದರ್ಶಕ ಆಡಳಿತಕ್ಕೆ ಇ-ಖಾತೆ
ಸ್ವತ್ತಿನ ದಾಖಲೆಗಳನ್ನು ತಂತ್ರಾಂಶದ ಮೂಲಕ ಪರಿಶೀಲಿಸಿ ಖಚಿತಪಡಿಸಿಕೊಳ್ಳುವುದು,
ಆಸ್ತಿ ತೆರಿಗೆ ಲೆಕ್ಕಚಾರ ಮತ್ತು ಪಾವತಿಯನ್ನು ಕಚೇರಿಗೆ ಬಾರದೇ ಸ್ವಯಂ ಮಾಡಿಕೊಳ್ಳುವ ವ್ಯವಸ್ಥೆ,
ಮತ್ತು ಪಾರದರ್ಶಕ ಆಡಳಿತ ವ್ಯವಸ್ಥೆ ಜಾರಿಗೊಳಿಸುವ ಉದ್ದೇಶದಿಂದ ಎಲ್ಲಾ ಆಸ್ತಿಗಳಿಗೆ ಇ-ಖಾತೆ ಕಡ್ಡಾಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೌರಾಯುಕ್ತರ ಮನವಿ
ಈ ಹಿನ್ನೆಲೆಯಲ್ಲಿ ಇ-ಖಾತೆ ಪಡೆಯದೇ ಇರುವ ಎಲ್ಲಾ ಆಸ್ತಿ ಮಾಲೀಕರು ತಕ್ಷಣ ನಗರಸಭೆಗೆ ದಾಖಲೆ ಸಲ್ಲಿಸಿ ಕಡ್ಡಾಯವಾಗಿ ಇ-ಖಾತೆ ಪಡೆದುಕೊಳ್ಳಬೇಕು ಎಂದು ನಗರಸಭೆಗಳ ಪೌರಾಯುಕ್ತರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.







