ಬೆಂಗಳೂರು: ಕೃತಕ ಬುದ್ಧಿಮತ್ತೆ (Artificial Intelligence – AI) ತಂತ್ರಜ್ಞಾನವು ಜಾಗತಿಕ ಉದ್ಯೋಗ ಕ್ಷೇತ್ರವನ್ನೇ ಕದಲಿಸುತ್ತಿರುವ ಸಂದರ್ಭದಲ್ಲಿ, ಉದ್ಯೋಗ ಭದ್ರತೆ ಬಗ್ಗೆ ಕಾರ್ಮಿಕರಲ್ಲಿ ಆತಂಕ ಹೆಚ್ಚಾಗಿದೆ. ಇನ್ಫೋಸಿಸ್, ಟಿಸಿಎಸ್, ಅಮೆಜಾನ್, ಮೆಟಾ ಸೇರಿದಂತೆ ಹಲವು ತಂತ್ರಜ್ಞಾನ ದೈತ್ಯ ಕಂಪನಿಗಳು ವಜಾಗೊಳಿಸುವಿಕೆ, ಹೊಸ ನೇಮಕಾತಿಗಳ ಸ್ಥಗಿತ ಮತ್ತು ಮೌಲ್ಯಮಾಪನಗಳ ವಿಳಂಬದಂತಹ ಕ್ರಮಗಳನ್ನು ಕೈಗೊಂಡಿವೆ.
ಈ ಬೆಳವಣಿಗೆಗಳ ನಡುವೆಯೇ ದೇಶದ ಪ್ರಮುಖ ಐಟಿ ಕಂಪನಿಯಾದ ಇನ್ಫೋಸಿಸ್ ಯುವ ಉದ್ಯೋಗಾಕಾಂಕ್ಷಿಗಳಿಗೆ ಭರವಸೆಯ ಸುದ್ದಿಯನ್ನು ನೀಡಿದೆ. ಕೃತಕ ಬುದ್ಧಿಮತ್ತೆ (AI) ವಿಸ್ತರಣೆಯ ಭಾಗವಾಗಿ 2027ರ ಹಣಕಾಸು ವರ್ಷದಲ್ಲಿ 20,000 ಪದವೀಧರರನ್ನು ನೇಮಿಸಿಕೊಳ್ಳುವುದಾಗಿ ಕಂಪನಿ ಘೋಷಿಸಿದೆ.
ದಾವೋಸ್ನಲ್ಲಿ ಘೋಷಣೆ
ಇನ್ಫೋಸಿಸ್ ಸಿಇಒ ಸಲೀಲ್ ಪರೇಖ್ ಅವರು ದಾವೋಸ್ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯ (World Economic Forum) ವಾರ್ಷಿಕ ಸಭೆಯಲ್ಲಿ ಈ ಮಹತ್ವದ ಘೋಷಣೆ ಮಾಡಿದ್ದಾರೆ ಎಂದು ವರದಿಗಳು ತಿಳಿಸಿವೆ.
ಕಂಪನಿ ಈಗಾಗಲೇ 2026ರ ಹಣಕಾಸು ವರ್ಷದ ಮೊದಲ ಮೂರು ತ್ರೈಮಾಸಿಕಗಳಲ್ಲಿ 18,000 ಪದವೀಧರರನ್ನು ನೇಮಿಸಿಕೊಂಡಿದೆ. ಡಿಸೆಂಬರ್ ತ್ರೈಮಾಸಿಕದಲ್ಲಿ ಮಾತ್ರವೇ ಇನ್ಫೋಸಿಸ್ನ ನಿವ್ವಳ ಸಿಬ್ಬಂದಿ ಸಂಖ್ಯೆ 5,000ಕ್ಕೂ ಹೆಚ್ಚು ಹೆಚ್ಚಾಗಿದೆ. ಈ ಹಣಕಾಸು ವರ್ಷದ ಅಂತ್ಯದ ವೇಳೆಗೆ ಒಟ್ಟು 20,000 ಹೊಸಬರನ್ನು ಸೇರಿಸಿಕೊಳ್ಳುವ ಗುರಿಯನ್ನು ಕಂಪನಿ ಹೊಂದಿದೆ.
AI, ಮೆಷಿನ್ ಲರ್ನಿಂಗ್ಗೆ ಹೆಚ್ಚುತ್ತಿರುವ ಬೇಡಿಕೆ
ಗ್ರಾಹಕರು ತಮ್ಮ ಬಜೆಟ್ ಅನ್ನು AI, ಯಂತ್ರ ಕಲಿಕೆ (Machine Learning) ಮತ್ತು ಸ್ವಯಂಚಾಲಿತ ವ್ಯವಸ್ಥೆಗಳ (Automation) ಕಡೆಗೆ ಮರುಹೊಂದಿಸುತ್ತಿರುವುದರಿಂದ ಉದ್ಯೋಗ ಬೇಡಿಕೆಯ ಸ್ವರೂಪ ಬದಲಾಗುತ್ತಿದೆ ಎಂದು ಸಲೀಲ್ ಪರೇಖ್ ತಿಳಿಸಿದ್ದಾರೆ.
ಕೃತಕ ಬುದ್ಧಿಮತ್ತೆಯ ಮೇಲಿನ ಗ್ರಾಹಕರ ಆಸಕ್ತಿ ಕೇವಲ ಪೈಲಟ್ ಯೋಜನೆಗಳಿಗೆ ಸೀಮಿತವಾಗಿಲ್ಲ. ವಿಶೇಷವಾಗಿ ಹಣಕಾಸು ಸೇವೆಗಳ ವಲಯದಲ್ಲಿ AI ಬಳಕೆ ವೇಗವಾಗಿ ಹೆಚ್ಚುತ್ತಿದೆ ಎಂದು ಅವರು ಹೇಳಿದ್ದಾರೆ. ಇನ್ಫೋಸಿಸ್ನ 25 ಅತಿದೊಡ್ಡ ಹಣಕಾಸು ಸೇವಾ ಗ್ರಾಹಕರಲ್ಲಿ 15 ಕಂಪನಿಗಳು AI ಪಾಲುದಾರರಾಗಿವೆ. ಈ ವಿಭಾಗವನ್ನು ಇನ್ನಷ್ಟು ವಿಸ್ತರಿಸಲಾಗುತ್ತಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.







