ಬೆಂಗಳೂರು :ರಾಜ್ಯದಲ್ಲಿನ ಆಸ್ತಿ ಮಾಲೀಕರಿಗೆ ರಾಜ್ಯ ಸರ್ಕಾರ ಮಹತ್ವದ ಸಿಹಿಸುದ್ದಿ ನೀಡಿದೆ. ಇ-ಖಾತಾ ಪಡೆಯುವಲ್ಲಿ ಉಂಟಾಗುತ್ತಿದ್ದ ವಿಳಂಬ ಹಾಗೂ ತೊಂದರೆಗಳ ಬಗ್ಗೆ ಅನೇಕ ಮನವಿಗಳು ಬಂದ ಹಿನ್ನೆಲೆಯಲ್ಲಿ, ನಗರಾಭಿವೃದ್ಧಿ ಇಲಾಖೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.
ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗಳು ಹಾಗೂ ಇ-ಖಾತಾ ಅಧಿಕಾರಿಗಳೊಂದಿಗೆ ಸಭೆ ನಡೆಸಿರುವ ಸರ್ಕಾರ, ಯಾವುದೇ ಇ-ಖಾತಾ ಅರ್ಜಿ ಸಲ್ಲಿಸಿದರೂ ಕಡ್ಡಾಯವಾಗಿ 2 ದಿನಗಳ ಒಳಗೆ ತೀರ್ಮಾನ ಕೈಗೊಳ್ಳಬೇಕು ಎಂದು ಸ್ಪಷ್ಟ ನಿರ್ದೇಶನ ನೀಡಿದೆ.
ಅರ್ಜಿಗಳ ಪರಿಶೀಲನೆ ವೇಳೆ ಯಾವುದೇ ಸಮಸ್ಯೆ ಕಂಡುಬಂದಲ್ಲಿ, ಅದನ್ನು ಪರಿಹರಿಸುವ ಸಲುವಾಗಿ ನೂರು ಜನರ ವಿಶೇಷ ಪರಿಶೀಲನಾ ತಂಡವನ್ನು ರಚಿಸಲಾಗಿದ್ದು, ಅವರು ಸ್ಥಳ ಪರಿಶೀಲನೆ ನಡೆಸಲಿದ್ದಾರೆ.
ಸರ್ಕಾರದ ಮಾಹಿತಿ ಪ್ರಕಾರ, ಈಗಾಗಲೇ 24 ಗಂಟೆಗಳೊಳಗೆ 60% ಇ-ಖಾತಾ ವಿತರಣೆ ಮಾಡುವ ವ್ಯವಸ್ಥೆ ಜಾರಿಗೆ ಬಂದಿದೆ. ಒಟ್ಟು 9.34 ಲಕ್ಷ ಇ-ಖಾತಾ ಅರ್ಜಿಗಳ ಪೈಕಿ 9.31 ಲಕ್ಷ ಅರ್ಜಿಗಳನ್ನು ಯಶಸ್ವಿಯಾಗಿ ವಿಲೇವಾರಿ ಮಾಡಲಾಗಿದೆ, ಇದು ಪ್ರಕ್ರಿಯೆಯ ವೇಗವನ್ನು ಸ್ಪಷ್ಟಪಡಿಸುತ್ತದೆ.
ಇ-ಖಾತಾ ಪಡೆಯಲು ಅಗತ್ಯ ದಾಖಲೆಗಳು
ಮಾಲೀಕರ ಭಾವಚಿತ್ರ ಹಾಗೂ ಆಧಾರ್ ಕಾರ್ಡ್
ಆಸ್ತಿ ತೆರಿಗೆ ಎಸ್.ಎ.ಎಸ್ (SAS) ಚಲನ್ ಸಂಖ್ಯೆ
ಸ್ವತ್ತಿನ ಕ್ರಯ / ನೋಂದಾಯಿತ ಪತ್ರ ಸಂಖ್ಯೆ
(ಕಾವೇರಿ ತಂತ್ರಾಂಶದಿಂದ ವಿದ್ಯುನ್ಮಾನವಾಗಿ ಪಡೆಯಲಾಗುತ್ತದೆ)
ವಿದ್ಯುತ್ ಆರ್.ಆರ್ ಸಂಖ್ಯೆ
(ಖಾಲಿ ನಿವೇಶನಗಳಿಗೆ ಅಗತ್ಯವಿಲ್ಲ)
ಸ್ವತ್ತಿನ ಛಾಯಾಚಿತ್ರ
ಸ್ವತ್ತಿಗೆ ಸಂಬಂಧಿಸಿದ ಇತರೆ ಪೂರಕ ದಾಖಲೆಗಳು
45 ಲಕ್ಷಕ್ಕೂ ಹೆಚ್ಚು ಕರಡು ಆಸ್ತಿ ದಾಖಲೆ ಪ್ರಕಟಣೆ
ನಗರ ಪ್ರದೇಶದ ನಿವಾಸಿಗಳ 45 ಲಕ್ಷಕ್ಕೂ ಹೆಚ್ಚು ಕರಡು ಆಸ್ತಿ ದಾಖಲೆಗಳನ್ನು ಇ-ಆಸ್ತಿ ತಂತ್ರಾಂಶದಲ್ಲಿ ಪ್ರಕಟಿಸಲಾಗುವುದು. ನಾಗರಿಕರು
www.eaasthi.karnataka.gov.in
ವೆಬ್‌ಸೈಟ್ ಮೂಲಕ ತಮ್ಮ ಆಸ್ತಿ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸಬಹುದು.
ಅಗತ್ಯವಿದ್ದಲ್ಲಿ ದಾಖಲೆಗಳನ್ನು ಸಲ್ಲಿಸಿ ತಿದ್ದುಪಡಿ ಅಥವಾ ತಕರಾರು ಅರ್ಜಿ ಸಲ್ಲಿಸಲು ಅವಕಾಶವಿದೆ. ಶುಲ್ಕವನ್ನು ಆನ್‌ಲೈನ್‌ನಲ್ಲೇ ಪಾವತಿಸಿ ದಾಖಲೆ ಸಲ್ಲಿಸಿದ ನಂತರ, ಅನುಮೋದಿತ ಅಧಿಕೃತ ಇ-ಖಾತೆಯನ್ನು ಪಡೆಯಬಹುದು.
K-1 ಕೇಂದ್ರಗಳಲ್ಲೂ ಸೇವೆ
ಆನ್‌ಲೈನ್ ಬಳಕೆಯಲ್ಲಿ ತೊಂದರೆ ಇರುವ ನಾಗರಿಕರು K-1 ಕೇಂದ್ರಗಳಿಗೆ ಭೇಟಿ ನೀಡಿ, ಅಲ್ಲಿಯೂ ಸಹ ತಂತ್ರಾಂಶದ ಮೂಲಕ ಇ-ಖಾತಾ ಸೇವೆಯನ್ನು ಪಡೆಯಬಹುದು.
ಇ-ಖಾತಾ ಪಡೆದ ನಂತರ, ಆಸ್ತಿ ತೆರಿಗೆಯನ್ನು ಸರಳವಾಗಿ ಆನ್‌ಲೈನ್ ಮುಖಾಂತರ ಪಾವತಿಸುವ ವ್ಯವಸ್ಥೆ ಲಭ್ಯವಿದೆ.
ಹೆಚ್ಚಿನ ಮಾಹಿತಿಗಾಗಿ
ವೆಬ್‌ಸೈಟ್ : www.eaasthi.karnataka.gov.in
ಸಹಾಯವಾಣಿ : 72595 85959







