Home » ರಾಜ್ಯ » ಆರು ತಿಂಗಳಲ್ಲಿ ಬಗರ್‌ಹುಕುಂ ಎಲ್ಲ ಅರ್ಹರಿಗೂ ಜಮೀನು ಮಂಜೂರು

ಆರು ತಿಂಗಳಲ್ಲಿ ಬಗರ್‌ಹುಕುಂ ಎಲ್ಲ ಅರ್ಹರಿಗೂ ಜಮೀನು ಮಂಜೂರು

ಬೆಂಗಳೂರು: ಇನ್ನ ಮುಂದೆ ಬಗರ್‌ಹುಕುಂ ಬಡವರ ಕೆಲಸ.  ಬಡವರು ಅರ್ಜಿ ಹಾಕಿ ಅವರು ಸುಮಾರು ವರ್ಷಗಳಿಂದ ಕಾದಿ ಕುಳಿತ್ತಿದ್ದಾರೆ ಈ ವಿಚಾರದಲ್ಲಿ ಹಲವು ತಹಸೀಲ್ದಾರರ ಶ್ರಮ ಶ್ಲಾಘನೀಯ. ಆದರೂ, ನಿರೀಕ್ಷೆಯ ಮಟ್ಟ ತಲುಪಿಲ್ಲ. ಮುಂದಿನ 6 ತಿಂಗಳಲ್ಲಿ ಎಲ್ಲ ಅರ್ಹರಿಗೂ ಜಮೀನು ಮಂಜೂರು ಮಾಡಿ ಎಂದು ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಸೂಚನೆ ನೀಡಿದರು.

ಶುಕ್ರವಾರ ವಿಕಾಸಸೌಧದಿಂದ ವೀಡಿಯೋಕಾನ್ಫರೆನ್ಸ್ ಮೂಲಕ ರಾಜ್ಯದ ಎಲ್ಲ ತಹಶೀಲ್ದಾರರ ಜತೆ ಪ್ರಗತಿ ಪರಿಶೀಲನ ಸಭೆ ನಡೆಸಿದ ಸಚಿವರು, ಕೆಲವು ಅಧಿಕಾರಿಗಳು ಬಡವರ ಕೆಲಸದ ಬಗ್ಗೆ ಅಸಡ್ಡೆ ಧೋರಣೆ ತೋರುತ್ತಿದ್ದು, ಅವರೂ ಶೀಘ್ರ ಎಚ್ಚೆತ್ತುಕೊಳ್ಳಬೇಕಿದೆ ಎಂದು ಕಿವಿಮಾತು ಹೇಳಿದರು.

ರಾಜ್ಯದ ಬಹುತೇಕ ಎಲ್ಲ ತಾಲೂಕುಗಳಲ್ಲೂ ಬಗರ್‌ಹುಕುಂ ಕಮಿಟಿ ರಚಿಸಲಾಗಿದೆ. ಗ್ರಾಮ ಆಡಳಿತ ಅಧಿಕಾರಿಯಿಂದ ತಹಶೀಲ್ದಾರರ ಎದುರು ಬರುವ ಅರ್ಜಿಗಳು ಸಾಧಾರಣವಾಗಿ ಅರ್ಹ ಅರ್ಜಿಯೇ ಆಗಿರುತ್ತದೆ. ಹೀಗಾಗಿ ಅಧಿಕಾರಿಗಳು ಪ್ರತಿ 15 ದಿನಗಳಿಗೊಮ್ಮೆ ಸ್ಥಳೀಯ ಶಾಸಕರ ನೇತೃತ್ವದಲ್ಲಿ ಸಭೆ ನಡೆಸಿ ಅರ್ಹರಿಗೆ ಜಮೀನು ಮಂಜೂರು ಮಾಡಿ. ಬಗರ್‌ಹುಕುಂ ಕೆಲಸಗಳನ್ನು ಚುರುಕಾಗಿಸಿ ಮುಂದಿನ ಆರು ತಿಂಗಳಲ್ಲಿ ಎಲ್ಲ ಅರ್ಹರಿಗೂ ಜಮೀನು ಮಂಜೂರು ಮಾಡಿ ಎಂದು ಗಡುವು ವಿಧಿಸಿದರು.

ಪೋಡಿ ದುರಸ್ತಿಗೆ ಚುರುಕು ಮುಟ್ಟಿಸಿ
ನಿಯಮದಂತೆ ತಹಶೀಲ್ದಾರರು ನಿಗದಿತ ಜಮೀನಿಗೆ ಸಂಬಂಧಿಸಿದ ನಮೂನೆ 1-5 ದಾಖಲೆಯನ್ನು ಸಿದ್ಧಪಡಿಸಿ ಮುಂದಿನ ಹಂತಕ್ಕೆ ನಮೂನೆ 6-10 ಕೆಲಸಕ್ಕಾಗಿ ಭೂ ಮಾಪನ ಇಲಾಖೆಗೆ ಕಡತ ಕಳುಹಿಸಬೇಕು. ಆದರೆ, ಬಹುತೇಕ ಜಿಲ್ಲೆಗಳಲ್ಲಿ ಈ ಸಂಖ್ಯೆ ಸಮಾಧಾನಕರವಾಗಿಲ್ಲ. ಇದೇ ವೇಳೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೋಡಿ ದುರಸ್ತಿ ಕೆಲಸ ಚುರುಕುಗೊಂಡಿರುವ ಬಗ್ಗೆ ಅಧಿಕಾರಿಗಳ ಶ್ರಮಕ್ಕೆ ಪ್ರಶಂಸೆ ವ್ಯಕ್ತಪಡಿಸಿದ ಸಚಿವರು, ಮುಂದಿನ ತಿಂಗಳು ಮುಖ್ಯಮಂತ್ರಿಗಳು ಮಂಗಳೂರಿಗೆ ಆಗಮಿಸುತ್ತಿದ್ದು, ಅಷ್ಟರಲ್ಲಿ ಕನಿಷ್ಠ 10 ಸಾವಿರ ಪ್ರಕರಣಗಳು ದುರಸ್ತಿಗೊಂಡು ರೈತರಿಗೆ ದಾಖಲೆ ನೀಡಬೇಕು ಎಂದು ತಹಶೀಲ್ದಾರರಿಗೆ ಗುರಿ ನಿಗದಿಪಡಿಸಿದರು.

ಅಸಡ್ಡೆ ತೋರಿದರೆ ನೋಟಿಸ್‌
ತಹಶೀಲ್ದಾರ್‌ ಕಚೇರಿಗಳಲ್ಲಿರುವ ಭೂ ದಾಖಲೆಗಳನ್ನು ಈಗಾಗಲೇ ಅಭಿಯಾನ ಮಾದರಿಯಲ್ಲಿ ಸ್ಕ್ಯಾನ್‌ ಮಾಡಿ ಡಿಜಿಟಲೀಕರಣಗೊಳಿಸಲಾಗುತ್ತಿದೆ. ಆದರೆ, ಈ ಕೆಲಸದಲ್ಲೂ ಅಸಡ್ಡೆ ತೋರಿರುವ ಕೆಲ ತಹಶೀಲ್ದಾರರಿಗೆ ನೋಟಿಸ್‌ ನೀಡುವ ಬಗ್ಗೆ ಸಚಿವರು ಸಭೆಯಲ್ಲಿ ಎಚ್ಚರಿಕೆ ನೀಡಿದರು. ರಾಜ್ಯಾದ್ಯಂತ ತಹಶೀಲ್ದಾರ್‌ ಕಚೇರಿಗಳ ರೆಕಾರ್ಡ್‌ ರೂಮ್‌ಗಳಲ್ಲಿ 3.6 ಕೋಟಿ ಕಡತಗಳು ಇವೆ. ಈ ಪೈಕಿ ಈಗಾಗಲೇ 26.42 ಲಕ್ಷ ಕಡತಗಳನ್ನು ಸ್ಕ್ಯಾನ್‌ ಮಾಡಿ ದಾಖಲೆಗಳ ಅಸಲಿಯತ್ತನ್ನು ಪರಿಶೀಲಿಸಿ ಸಾರ್ವಜನಿಕ ಡೊಮೈನ್‌ನಲ್ಲಿ ಅಪ್ಲೋಡ್‌ ಮಾಡಲಾಗಿದೆ. ಉಳಿದ ಕಡತಗಳನ್ನೂ ಈ ವರ್ಷಾಂತ್ಯದೊಳಗೆ ಅಭಿಯಾನ ಮಾದರಿ ಸ್ಕ್ಯಾನ್‌ ಮಾಡಿ ಡಿಜಿಟಲೀಕರಿಸಬೇಕು ಎಂದು ಸೂಚಿಸಿದರು.

ಈ ಸುದ್ದಿಗೆ ನಿಮ್ಮ ಪ್ರತಿಕ್ರಿಯೆಯನ್ನು ವಿಶ್ರಾಂತಿ ಮಾಡಿ

Leave a Comment

Share This