Home » ರಾಜ್ಯ » ಅಲೆಮಾರಿ ಪರಿಶಿಷ್ಟ ಜಾತಿಗಳಿಗೆ ಶೇ.1 ವಿಶೇಷ ಸ್ಥಾನಮಾನ ವಿಚಾರ: ಸರ್ಕಾರದ ಸ್ಪಷ್ಟತೆ

ಅಲೆಮಾರಿ ಪರಿಶಿಷ್ಟ ಜಾತಿಗಳಿಗೆ ಶೇ.1 ವಿಶೇಷ ಸ್ಥಾನಮಾನ ವಿಚಾರ: ಸರ್ಕಾರದ ಸ್ಪಷ್ಟತೆ

ಮಾನ್ವಿ: ರಾಜ್ಯದ ಅಲೆಮಾರಿ ಪರಿಶಿಷ್ಟ ಜಾತಿಗಳಾದ ಚನ್ನದಾಸರ್, ಹೊಲೆಯಾದಾಸರ್, ಮಾಲದಾಸರ್ ಸಮುದಾಯಗಳ ಬಹುದಿನಗಳ ಬೇಡಿಕೆಗಳನ್ನು ಈಡೇರಿಸಲು ರಾಜ್ಯ ಸರ್ಕಾರ ಸಂಪೂರ್ಣ ಬದ್ಧವಾಗಿದೆ ಎಂದು ಸಚಿವ ಎನ್.ಎಸ್. ಬೋಸರಾಜು ಹೇಳಿದರು.
ಅವರು ಹೇ ಪಟ್ಟಣದಲ್ಲಿ ಭಾನುವಾರ ರಾಜ್ಯ ಅಲೆಮಾರಿ ಪರಿಶಿಷ್ಟ ಜಾತಿ ಚನ್ನದಾಸರ್, ಹೊಲೆಯಾದಾಸರ್, ಮಾಲದಾಸರ್ ಕ್ಷೇಮಾಭಿವೃದ್ಧಿ ಸಂಘ ಹಮ್ಮಿಕೊಂಡಿದ್ದ ಸ್ವಾಭಿಮಾನ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ನ್ಯಾಯಮೂರ್ತಿ ನಾಗಮೋಹನ್‌ದಾಸ್ ಆಯೋಗದ ವರದಿಯಂತೆ ಅಲೆಮಾರಿ ಸಮುದಾಯಗಳಿಗೆ ಒಳ ಮೀಸಲಾತಿಯಲ್ಲಿ ಶೇ.1ರಷ್ಟು ವಿಶೇಷ ಸ್ಥಾನಮಾನ ನೀಡುವ ಕುರಿತು ಸರ್ಕಾರ ಗಂಭೀರವಾಗಿ ಚಿಂತನೆ ನಡೆಸುತ್ತಿದೆ ಎಂದು ತಿಳಿಸಿದರು. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಹಲವು ಸಭೆಗಳು ನಡೆದಿದ್ದು, ಯಾವುದೇ ಸಮುದಾಯಕ್ಕೂ ಅನ್ಯಾಯವಾಗದಂತೆ ನಿರ್ಧಾರ ಕೈಗೊಳ್ಳಲಾಗುತ್ತದೆ. ಆದಷ್ಟು ಬೇಗ ಉತ್ತಮ ಸುದ್ದಿಯನ್ನು ನೀಡಲಾಗುವುದು ಎಂದು ಭರವಸೆ ನೀಡಿದರು.
ಶಾಸಕ ಹಂಪಯ್ಯ ನಾಯಕ ಮಾತನಾಡಿ, ಅಲೆಮಾರಿ ಸಮುದಾಯಗಳಿಗೆ ಆಗುತ್ತಿರುವ ಸಮಸ್ಯೆಗಳ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ನ್ಯಾಯ ದೊರಕಿಸುವ ಕೆಲಸ ಮಾಡಲಾಗುವುದು ಎಂದರು. ಸಮುದಾಯದ ಮಕ್ಕಳು ಮತ್ತು ಯುವಕರು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಸಮುದಾಯಗಳು ಸಂಘಟಿತವಾದಾಗ ಮಾತ್ರ ತಮ್ಮ ಹಕ್ಕುಗಳನ್ನು ಸಾಧಿಸಿಕೊಳ್ಳಲು ಸಾಧ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸಂಶೋಧನಾಧಿಕಾರಿ ಡಾ. ಮಲ್ಲಿಕಾರ್ಜುನ ಮಾನ್ಪಡೆ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಡಾ. ವಿ. ಚಲಪತಿ, ಕಾರ್ಯದರ್ಶಿ ಮಹಾದೇವಪ್ಪ, ಮಾಜಿ ಶಾಸಕರಾದ ರಾಜಾವೆಂಕಟಪ್ಪ ನಾಯಕ, ಗಂಗಾಧರ ನಾಯಕ, ನಾಗಲಾಂಬಿಕೆ ಸಹಕಾರಿಯ ಅಧ್ಯಕ್ಷೆ ನಾಗರತ್ನಾ ಪಾಟೀಲ್, ಪ್ರಮುಖರಾದ ಬಾಲಸ್ವಾಮಿ ಕೊಡ್ಲಿ, ರಾಜಾ ಸುಭಾಷಚಂದ್ರ ನಾಯಕ, ಯುವ ಘಟಕದ ರಾಜ್ಯಾಧ್ಯಕ್ಷ ಬಿ. ಉಮೇಶ ಯಾಪಲದಿನ್ನಿ, ಬುಡ್ಗ ಜಂಗಮ ರಾಜ್ಯ ಸಂಚಾಲಕ ಮಹಾಂತೇಶ್ ಸೀಕಲ್, ಬಿ. ನಾಗಪ್ಪ ಬಾಯಿದೊಡ್ಡಿ, ಎಸ್. ವೆಂಕೋಬ, ಯಲ್ಲಪ್ಪ, ಬಸವರಾಜ, ಪ್ರದೀಪ್, ರಮೇಶ್, ರಾಮಕೃಷ್ಣ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಈ ಸುದ್ದಿಗೆ ನಿಮ್ಮ ಪ್ರತಿಕ್ರಿಯೆಯನ್ನು ವಿಶ್ರಾಂತಿ ಮಾಡಿ

Leave a Comment

Share This