Home » ಬೀದರ ಜಿಲ್ಲೆ » ಅಲೆಮಾರಿ–ಅರೆ ಅಲೆಮಾರಿ ಜನಾಂಗದ ನಿವೇಶನ ವಿಚಾರದಲ್ಲಿ ಹೊಸ ಪ್ರಸ್ತಾವನೆಗೆ ಆಕ್ರೋಶ

ಅಲೆಮಾರಿ–ಅರೆ ಅಲೆಮಾರಿ ಜನಾಂಗದ ನಿವೇಶನ ವಿಚಾರದಲ್ಲಿ ಹೊಸ ಪ್ರಸ್ತಾವನೆಗೆ ಆಕ್ರೋಶ

ಔರಾದ (ಬಿ) : ಔರಾದ್ ಪಟ್ಟಣದ ಬಹುಜನ ಜನ ಸಂಪರ್ಕ ಕಾರ್ಯಾಲಯದಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಹುಜನ ಮುಖಂಡ ಶ್ರೀ ರಾಹುಲ ಖಂದಾರೆ ಅವರು, ಔರಾದ್ ತಾಲ್ಲೂಕಿನ ಅಲೆಮಾರಿ ಹಾಗೂ ಇತರೆ ಅಲೆಮಾರಿ ಜನಾಂಗದವರ ಬಹುದಿನಗಳ ಬೇಡಿಕೆಯಾಗಿದ್ದ ಸರ್ಕಾರಿ ನಿವೇಶನ ಸಮಸ್ಯೆಗೆ ಈಗಾಗಲೇ ಪರಿಹಾರ ಕಂಡುಬಂದಿದ್ದರೂ, ಇತ್ತೀಚಿನ ಹೊಸ ಪ್ರಸ್ತಾವನೆಯಿಂದ ಸಮುದಾಯದಲ್ಲಿ ಆಕ್ರೋಶ ಉಂಟಾಗಿದೆ ಎಂದು ಹೇಳಿದರು.
ಔರಾದ್ ತಾಲ್ಲೂಕಿನ ಔರಾದ್ ಪಟ್ಟಣದ ಸರ್ಕಾರಿ ಗಾಯರಾಣ ಭೂಮಿ ಸರ್ವೆ ನಂ.183 ರಲ್ಲಿ ಒಟ್ಟು ವಿಸ್ತೀರ್ಣ 47 ಎಕರೆ 38 ಗುಂಟೆ ಪೈಕಿ 2 ಎಕರೆ 00 ಗುಂಟೆ ಭೂಮಿಯನ್ನು ಅಲೆಮಾರಿ ಹಾಗೂ ಇತರೆ ಅಲೆಮಾರಿ ಜನಾಂಗದವರಿಗೆ ಸರ್ಕಾರಿ ನಿವೇಶನಕ್ಕಾಗಿ ಲಭ್ಯವಿದೆ ಎಂದು ಕಂದಾಯ ನಿರೀಕ್ಷಕರು ಹಾಗೂ ತಾಲ್ಲೂಕು ಭೂ ಮಾಪಕರ ವರದಿಗಳಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಈ ಕುರಿತು ಮಾನ್ಯ ಜಿಲ್ಲಾಧಿಕಾರಿಗಳು, ಬೀದರ್ ರವರು 18-06-2018 ರಂದು (ಕಂ:ಎಲ್.ಎನ್.ಡಿ/ಸಿಆರ್-372/2017-18) ಮತ್ತು ಮಾನ್ಯ ಸಹಾಯಕ ಆಯುಕ್ತರು, ಬೀದರ್ ರವರು 28-07-2018 ರಂದು (ಭೂಮಿ/ಸಿಆರ್/2017-18) ಸೂಕ್ತ ನಿರ್ದೇಶನಗಳನ್ನು ನೀಡಿದ್ದರು ಎಂದು ಅವರು ವಿವರಿಸಿದರು.
ಇದರಂತೆ, 26-11-2015 ರಂದು ಕಂದಾಯ ನಿರೀಕ್ಷಕರು ಸಲ್ಲಿಸಿದ ಪಂಚನಾಮ ವರದಿಯಲ್ಲಿಯೂ 2 ಎಕರೆ ಭೂಮಿ ನಿವೇಶನಕ್ಕೆ ಯೋಗ್ಯವಾಗಿದೆ ಎಂದು ದೃಢಪಡಿಸಲಾಗಿದೆ. ತಾಲ್ಲೂಕು ಭೂ ಮಾಪಕರು ಸ್ಥಳ ಪರಿಶೀಲನೆ ನಡೆಸಿ ಅಳತೆ ಮಾಡಿ ಸೈಜ್ ನಕಾಶೆಯನ್ನು ಸಲ್ಲಿಸಿದ್ದು, ಚೆಕ್‌ಲಿಸ್ಟ್, ಪಹಾಣಿ ಪತ್ರಿಕೆ ಸೇರಿದಂತೆ ಅಗತ್ಯ ದಾಖಲೆಗಳನ್ನು ಜಿಲ್ಲಾಧಿಕಾರಿಗಳ ಪರಿಶೀಲನೆಗೆ ಒದಗಿಸಲಾಗಿದೆ ಎಂದು ರಾಹುಲ ಖಂದಾರೆ ಅವರು ಹೇಳಿದರು.
ಸರ್ವೆ ನಂ.205 ರಲ್ಲಿಯೂ ನಿವೇಶನಕ್ಕೆ ಕಾಯ್ದಿರಿಕೆ
ಇನ್ನೊಂದೆಡೆ, ಔರಾದ್ ಪಟ್ಟಣದ ಸರ್ಕಾರಿ ಗಾಯರಾಣ ಜಮೀನು ಸರ್ವೆ ನಂ.205 ರಲ್ಲಿ ಒಟ್ಟು ವಿಸ್ತೀರ್ಣ 50 ಎಕರೆ 11 ಗುಂಟೆ ಪೈಕಿ 2 ಎಕರೆ 00 ಗುಂಟೆ ಭೂಮಿಯನ್ನು ಅಲೆಮಾರಿ ಹಾಗೂ ಅರೆ ಅಲೆಮಾರಿ ಜನಾಂಗದವರ ನಿವೇಶನಕ್ಕಾಗಿ ಕಾಯ್ದಿರಿಸುವ ಕುರಿತು ಜಿಲ್ಲಾಡಳಿತ ಮಹತ್ವದ ಆದೇಶವನ್ನು ಹೊರಡಿಸಿದೆ. ಈ ಸಂಬಂಧ ತಹಸೀಲ್ದಾರರು, ಔರಾದ್ (ಬಿ) ರವರು 14-11-2022 ರಂದು ಹಾಗೂ ಸಹಾಯಕ ಆಯುಕ್ತರು, ಬೀದರ್ ರವರು 30-11-2022 ರಂದು ಸಲ್ಲಿಸಿದ ವರದಿಗಳನ್ನು ಪರಿಶೀಲಿಸಿ, ದಿನಾಂಕ 27-12-2022 ರಂದು ಜಿಲ್ಲಾಧಿಕಾರಿಗಳು, ಬೀದರ್ ಜಿಲ್ಲೆ ಅಧಿಕೃತ ಆದೇಶ ನೀಡಿದ್ದರು.
ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಭಾ.ಆ.ಸೇ ಅವರು ಕರ್ನಾಟಕ ಭೂ ಕಂದಾಯ ಕಾಯ್ದೆಯಡಿ ನೀಡಿರುವ ಅಧಿಕಾರವನ್ನು ಚಲಾಯಿಸಿ, ಔರಾದ್ ತಾಲ್ಲೂಕಿನ ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗದವರ ಪುನರ್ವಸತಿ ಹಾಗೂ ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಹೊಸ ಪ್ರಸ್ತಾವನೆಗೆ ತೀವ್ರ ವಿರೋಧ
ಸಾಮಾಜಿಕ ನ್ಯಾಯದತ್ತ ಮಹತ್ವದ ಹೆಜ್ಜೆಯಾಗಿ ಪರಿಗಣಿಸಲಾದ ಈ ಎರಡು ಸರ್ವೆ ನಂಬರ್‌ಗಳ (183 ಮತ್ತು 205) ಬದಲಾಗಿ, ಇದೀಗ ಮಹಾಡೋಣಗಾಂವ ಗ್ರಾಮದ ಸರ್ವೆ ನಂ.105 ರಲ್ಲಿ 2 ಎಕರೆ ಭೂಮಿಯನ್ನು ನೀಡುವ ಹೊಸ ಪ್ರಸ್ತಾವನೆ ಇಡಲಾಗಿದೆ. ಇದರಿಂದ ಅಲೆಮಾರಿ ಹಾಗೂ ಅರೆ ಅಲೆಮಾರಿ ಜನಾಂಗದವರ ನಿವೇಶನ ಹಕ್ಕಿಗೆ ಧಕ್ಕೆ ಉಂಟಾಗಿದ್ದು, ಸಮುದಾಯದೊಳಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ ಎಂದು ರಾಹುಲ ಖಂದಾರೆ ಅವರು ಹೇಳಿದರು. ಈಗಾಗಲೇ ಅಧಿಕೃತ ದಾಖಲೆಗಳು ಮತ್ತು ಆದೇಶಗಳ ಮೂಲಕ ನಿಶ್ಚಿತಗೊಂಡಿರುವ ಸ್ಥಳದಲ್ಲೇ ನಿವೇಶನ ನೀಡಬೇಕು ಎಂಬುದು ಸಮುದಾಯದ ಆಗ್ರಹವಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತಿ
ಪತ್ರಿಕಾಗೋಷ್ಠಿಯಲ್ಲಿ ಬಹುಜನ ಸಂಘಟನೆಗಳ ಮುಖಂಡರಾದ ಶ್ರೀ ಸುಭಾಷ್ ಲಾಧಾ, ಶ್ರೀ ಸಂತೋಷ್ ಶಿಂದೆ,ಸಿದ್ಧಾರ್ಥ್ ಬೋಸ್ಲೆ, ಪ್ರವೀಣ್ ಕಾರಂಜೆ, ದಿನೇಶ್ ಶಿಂಧೆ, ಸಂತೋಷ ಸೂರ್ಯವಂಶ, ಸಂತೋಷ ಕಾಂಬ್ಳೆ, ಭೀಮರಾವ ಮುಂಗನಾಳ, ಬಸವರಾಜ ಕಾಂಬ್ಳೆ, ನಾಗನಾಥ ವಾಕುಡ ಸೇರಿದಂತೆ ಅಲೆಮಾರಿ ಮತ್ತು ಇತರೆ ಅಲೆಮಾರಿ ಜನಾಂಗದ ಅನೇಕ ಮುಖಂಡರು ಹಾಗೂ ಪತ್ರಕರ್ತರು ಉಪಸ್ಥಿತರಿದ್ದರು.

ಈ ಸುದ್ದಿಗೆ ನಿಮ್ಮ ಪ್ರತಿಕ್ರಿಯೆಯನ್ನು ವಿಶ್ರಾಂತಿ ಮಾಡಿ

Leave a Comment

Share This