Home » ರಾಜ್ಯ » ಅತಿಥಿ ಉಪನ್ಯಾಸಕರ ನೇಮಕಾತಿ ಕೈಬಿಟ್ಟ ಸರ್ಕಾರ: ವಿಜಯೇಂದ್ರ ಎದುರು ಅಳಲು

ಅತಿಥಿ ಉಪನ್ಯಾಸಕರ ನೇಮಕಾತಿ ಕೈಬಿಟ್ಟ ಸರ್ಕಾರ: ವಿಜಯೇಂದ್ರ ಎದುರು ಅಳಲು

ಶಿಮೊಗಾ: ಜನವರಿ 3 ರಂದು ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳಲ್ಲಿ ದಶಕಗಳಿಂದ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರ ಸಮಸ್ಯೆಗಳ ಕುರಿತು ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿಯ ನಿಯೋಗವು ಶಿಕಾರಿಪುರದ ಕುಮದ್ವತಿ ವಿದ್ಯಾಸಂಸ್ಥೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
ರಾಜ್ಯದ ವಿವಿಧ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸುಮಾರು 60,000 ಅತಿಥಿ ಉಪನ್ಯಾಸಕರನ್ನು ಯುಜಿಸಿ ಅರ್ಹತೆ ಹೊಂದಿಲ್ಲ ಎಂಬ ಕಾರಣ ನೀಡಿ 2025–26ನೇ ಶೈಕ್ಷಣಿಕ ಸಾಲಿನ ನೇಮಕಾತಿ ಪ್ರಕ್ರಿಯೆಯಿಂದ ಹೊರಗಿಟ್ಟಿರುವುದು ಸಾವಿರಾರು ಕುಟುಂಬಗಳನ್ನು ಸಂಕಷ್ಟಕ್ಕೆ ತಳ್ಳಿದೆ ಎಂದು ನಿಯೋಗವು ತಿಳಿಸಿತು.
ದೀರ್ಘಕಾಲ ಸೇವೆ ಸಲ್ಲಿಸಿದ ಅನೇಕ ಅತಿಥಿ ಉಪನ್ಯಾಸಕರು ಈಗಾಗಲೇ ವಯೋಮಿತಿ ಮೀರಿರುವುದರಿಂದ ಪರ್ಯಾಯ ಉದ್ಯೋಗ ಪಡೆಯುವುದು ಅಸಾಧ್ಯವಾಗಿದೆ. ಕಳೆದ ಎರಡು ತಿಂಗಳುಗಳಿಂದ ತಾತ್ಕಾಲಿಕ ಹುದ್ದೆಯೂ ಇಲ್ಲದೆ, ವೇತನವಿಲ್ಲದೆ ಜೀವನ ನಡೆಸುತ್ತಿರುವ ಕೆಲವರು ಬಿಪಿ, ಶುಗರ್ ಔಷಧಿಗೂ ಹಣವಿಲ್ಲದೆ ಪರದಾಡುವ ಸ್ಥಿತಿ ಎದುರಿಸುತ್ತಿದ್ದಾರೆ ಎಂದು ನಿಯೋಗವು ಆತಂಕ ವ್ಯಕ್ತಪಡಿಸಿತು.
ಈ ಹಿನ್ನೆಲೆಯಲ್ಲಿ ರಾಜ್ಯದ ಅಧಿಕೃತ ವಿರೋಧ ಪಕ್ಷವಾಗಿರುವ ಬಿಜೆಪಿ ಅತಿಥಿ ಉಪನ್ಯಾಸಕರ ಪರವಾಗಿ ಧ್ವನಿ ಎತ್ತಬೇಕು ಎಂದು ನಿಯೋಗವು ಒತ್ತಾಯಿಸಿತು.
ಸರ್ಕಾರವು ಅತಿಥಿ ಉಪನ್ಯಾಸಕರ ವಿಷಯದಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಎಸ್‌ಎಲ್‌ಪಿ ಸಲ್ಲಿಸುವುದಾಗಿ ಹೇಳುತ್ತಿದ್ದರೂ, ಈ ಸಂಬಂಧ ಸ್ಪಷ್ಟ ಮಾಹಿತಿ ಲಭ್ಯವಿಲ್ಲ. ಆದ್ದರಿಂದ ಸುಪ್ರೀಂ ಕೋರ್ಟ್ ತೀರ್ಪು ಬರುವವರೆಗೂ ರಾಜ್ಯದ ವಿವಿಧ ಇಲಾಖೆಗಳಲ್ಲಿರುವ ಅಥವಾ ಮಾತೃ ಇಲಾಖೆಯಲ್ಲಿನ ಖಾಲಿ ನಾನ್-ಟೀಚಿಂಗ್ ಹುದ್ದೆಗಳಿಗೆ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳುವಂತೆ ಸರ್ಕಾರದ ಮೇಲೆ ಒತ್ತಡ ಹೇರುವಂತೆ ನಿಯೋಗವು ಮನವಿ ಮಾಡಿತು.
ನಿಯೋಗದಲ್ಲಿ ರಾಜ್ಯ ಸಮನ್ವಯ ಸಮಿತಿಯ ಅಧ್ಯಕ್ಷ ಡಾ. ಸೋಮಶೇಖರ್ ಎಚ್. ಶಿಮೊಗ್ಗಿ, ಡಾ. ಈಶ್ವರ ರಾವ್, ನಾಗರಾಜ್ ಕಾಗಿನೆಲೆ, ಶಿವಮೂರ್ತಿ, ಸುಧೀರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಈ ಸುದ್ದಿಗೆ ನಿಮ್ಮ ಪ್ರತಿಕ್ರಿಯೆಯನ್ನು ವಿಶ್ರಾಂತಿ ಮಾಡಿ

Leave a Comment

Share This